ಶಿಡ್ಲಘಟ್ಟ: ವೃದ್ದ ತಂದೆಯನ್ನು ನೋಡಿಕೊಳ್ಳದೇ ಹೊರ ದಬ್ಬಿದ್ದ ಮಕ್ಕಳ ಹೆಸರಲ್ಲಿದ್ದ ಆಸ್ತಿಯನ್ನು ಪುನಃ ತಂದೆಗೆ ಒಪ್ಪಿಸುವುವಂತೆ ಚಿಕ್ಕಬಳ್ಳಾಪುರ ಜಿಲ್ಲಾ ಉಪ ವಿಭಾಗಾಧಿಕಾರಿ ಆದೇಶ ಹೋರಡಿಸಿದ್ದಾರೆ.
ನಗರದ ಕೆಕೆ ಪೇಟೆ ನಿವಾಸಿ ನಾರಾಯಣಪ್ಪ (80) ಜೀವನ ನಿರ್ವಣೆ ಕುರಿತು ಕಲಂ 23 ರಂತೆ ನಗರದ ಕೆಕೆ ಪೇಟೆಯ ಟಿಬಿ ರಸ್ತೆಯಲ್ಲಿರುವ ಖಾತೆ ಸಂಖ್ಯೆ 152, 156/10,180, 154/108/ಎ, 4176/365 ರ ನಿವೇಶನದ ವಿಭಾಗ ಪತ್ರವನ್ನು ರದ್ದು ಗೊಳಿಸಿ ತಮ್ಮ ಹೆಸರಿಗೆ ಮರು ಖಾತೆ ಮಾಡುವಂತೆ ಕೋರಿದ್ದರು. ತಂದೆ ತಾಯಿಯರ ಮತ್ತು ಹಿರಿಯ ನಾಗರೀಕರ ಪೋಷಣೆ ಮತ್ತು ಶ್ರೇಯೋಭಿವೃದ್ದಿ ಹಾಗು ಸಂರಕ್ಷಣೆ ಕಾಯ್ದೆ 2007 ರ ಅಡಿ ವಿಭಾಗ ವಾಗಿದ್ದ ಆಸ್ತಿಯನ್ನು ಪನಃ ನಾರಾಯಣಪ್ಪನವರ ಹೆಸರಿಗೆ ಮರು ಖಾತೆ ಮಾಡುವಂತೆ ಜಿಲ್ಲಾ ಉಪ ವಿಭಾಗಾಧಿಕಾರಿ ಡಾ.ಸಂತೋಷ್ ಕುಮಾರ್ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತರಿಗೆ ಆದೇಶಿಸಿದ್ದರು.
ಪೌರಾಯುಕ್ತ ಶ್ರೀಕಾಂತ್ ಮಂಗಳವಾರ ಬೆಳೆಗ್ಗೆ 10.30 ಕ್ಕೆ ಪೋಲಿಸರ ರಕ್ಷಣೆಯಲ್ಲಿ ಆದೇಶದಲ್ಲಿ ಸೂಚಿಸಿರುವ ಆಸ್ತಿಗಳನ್ನು ವಶ ಪಡಿಸಿಕೊಂಡು ಖಾತೆ ಬದಲಾಯಿಸಿ ಸಾರ್ವಜನಿಕರ ಸಮ್ಮುಖದಲ್ಲಿ ಅಂಗಡಿ ಮತ್ತು ಮನೆಗಳ ಬೀಗದ ಕೀ ಗಳನ್ನು ನಾರಾಯಣಪ್ಪನವರಿಗೆ ಹಸ್ತಾಂತರಿಸಿದರು.
ಆಸ್ತಿಯನ್ನು ತಮ್ಮ ಐದು ಜನ ಗಂಡು ಮಕ್ಕಳಾದ ಗೋಪಾಲಕೃಷ್ಣ, ವೆಂಕಟೇಶ್, ಶ್ರೀನಿವಾಸ್, ಬಿಸಪ್ಪ ಮತ್ತು ಚಂದ್ರಶೇಖರ್ ಗೆ ಸಮನಾಗಿ ವಿಭಾಗ ಮಾಡಿ ಹಂಚಿದ್ದರು. ತಂದೆಯನ್ನು ಮೊದ ಮೊದಲು ಚೆನ್ನಾಗಿ ನೋಡಿಕೊಂಡಿದ್ದ ಮಕ್ಕಳು ನಂತರ ತಿರಸ್ಕಾರ ಭಾವದಿಂದ ನೋಡುತ್ತಿದ್ದರು, 2009 ರಿಂದ ವಾಣಿಜ್ಯ ಅಂಗಡಿ ಮಳಿಗೆಗಳಿಂದ ಬರುತ್ತಿದ್ದ ಬಾಡಿಗೆಯಲ್ಲಿ ತಮ್ಮ ಖರ್ಚಿಗೆ ಬಿಡಗಾಸು ಕೊಡುತ್ತಿರಲಿಲ್ಲವೆಂದು ಆರೋಪಿಸಿ ನಾರಾಯಣಪ್ಪ ಜಿಲ್ಲಾ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.