ಬೀಜಿಂಗ್: ಚೀನಾ ದೇಶ ಮತ್ತೆ ಭಾರತದ ವಿರುದ್ಧವಾಗಿ ನಿಂತಿದೆ. ಚೀನಾ ಅರುಣಾಚಲ ಪ್ರದೇಶದಲ್ಲಿ ಹಕ್ಕು ಸಾಧಿಸುವ ಉದ್ದೇಶದಿಂದ ಇಲ್ಲಿನ 11 ಸ್ಥಳಗಳ ಹೆಸರುಗಳನ್ನು ಬದಲಾಯಿಸಿದೆ.
ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಮೂರನೇ ಹಂತದಲ್ಲಿ ಹೆಸರುಗಳನ್ನು ಬದಲಿಸಿದೆ ಎಂದು ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ. ಅರುಣಾಚಲ ಪ್ರದೇಶದ ಆರು ಸ್ಥಳಗಳಿಗೆ 2017ರಲ್ಲಿ ಹಾಗೂ 15 ಸ್ಥಳಗಳಿಗೆ 2021ರಲ್ಲಿ ಚೀನಾ ಮರುನಾಮಕರಣ ಮಾಡಿತ್ತು. ಚೀನಾದ ಈ ನಡೆಯನ್ನು ಭಾರತವು ಈ ಹಿಂದೆಯೇ ತಳ್ಳಿಹಾಕಿದ್ದು ಇದೀಗ ಮತ್ತೆ 11 ಸ್ಥಳಗಳ ಹೆಸರನ್ನು ಬದಲಾಯಿಸಿದೆ.
ಭಾರತವು ಇತ್ತೀಚೆಗೆ ಗಡಿ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ G20 ಸರಣಿ ಕಾರ್ಯಕ್ರಮಗಳ ಭಾಗವಾಗಿ ಮಹತ್ವದ ಸಭೆಯನ್ನು ನಡೆಸಿತ್ತು. ಈ ಸಭೆಯಲ್ಲಿ ಚೀನಾ ಗೈರಾಗಿದ್ದು, ವಿವಾದಿತ ಅರುಣಾಚಲ ಪ್ರದೇಶದಲ್ಲಿ ಜಿ20 ಸಭೆ ಆಯೋಜನೆ ಕುರಿತು ಪರೋಕ್ಷ ಅಸಮಾಧಾನ ಹೊಂದಿದ್ದ ಚೀನಾ ಇದೀಗ ಚೀನಾದ ಪ್ರಮಾಣೀಕೃತ ಹೆಸರುಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಈ 11 ಪ್ರದೇಶಗಳಿಗೆ ಚೈನೀಸ್, ಟಿಬೆಟಿಯನ್ ಮತ್ತು ಪಿನ್ಯಿನ್ ಅಕ್ಷರಗಳಲ್ಲಿ ಈ ಹೆಸರುಗಳನ್ನು ನೀಡಲಾಗಿದೆ.