ನವದೆಹಲಿ: ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತವನ್ನು ಅವಮಾನಿಸಿದ್ದಾರೆ. ಸುಳ್ಳು ಮಾಹಿತಿ ನೀಡಿ ಭಾರತದ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ.
ಈ ವಿವಾದ ಬೆನ್ನಲ್ಲೇ ಇದೀಗ ರಾಹುಲ್ ಗಾಂಧಿ ಸಂದರ್ಶನ ಮತ್ತೆ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸುವ ಭರದಲ್ಲಿ, ವಿದೇಶಾಂಗ ಸಚಿವ ಎಸ್ ಜೈಶಂಕರ್ಗೆ ಚೀನಾದ ಬೆದರಿಕೆ ಏನೂ ಅನ್ನೋದೆ ಅರ್ಥವಾಗಿಲ್ಲ ಎಂದಿದ್ದಾರೆ. ಚೀನಾ ಒಡ್ಡುತ್ತಿರುವ ಬೆದರಿಕೆಗೆಯನ್ನು ಜೈಶಂಕರ್ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಭಾರತದ ನೆಲವನ್ನೂ ಯಾರೂ ಆಕ್ರಮಿಸಿಲ್ಲ ಅನ್ನೋ ಪ್ರಧಾನಿ ಮೋದಿ ಹೇಳಿಕೆ, ಚೀನಾಗೆ ಆಮಂತ್ರಣ ನೀಡಿದಂತೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಲಂಡನ್ನಲ್ಲಿರು ಭಾರತೀಯ ಪತ್ರಕರ್ತರ ಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಚೀನಾ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ, ಬಿಜೆಪಿ ಸರ್ಕಾರದ ವಿದೇಶಾಂಗ ನೀತಿಯನ್ನು ಬೆಂಬಲಿಸಿದ್ದಾರೆ. ರಷ್ಯಾ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತ ತೆಗೆದುಕೊಂಡ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಚೀನಾ ಈಗಾಗಲೇ 2,000 ಚದರ ಕಿಲೋಮೀಟರ್ ಭಾರತದ ಸ್ಥಳವನ್ನು ಆಕ್ರಮಿಸಿಕೊಂಡಿದೆ. ಆದರೆ ಪ್ರಧಾನಿ ಮೋದಿ ಮಾತು ತದ್ವಿರುದ್ಧವಾಗಿದೆ. ಯಾರೂ ಕೂಡ ಒಂದು ಇಂಚು ಜಾಗ ಆಕ್ರಮಿಸಿಕೊಂಡಿಲ್ಲ ಎಂದು ಹೇಳುತ್ತಿದ್ದಾರೆ. ಚೀನಾ ವಿರುದ್ಧ ಗಡಿ ವಿಚಾರದಲ್ಲಿ ಭಾರತ ಅತ್ಯಂತ ಎಚ್ಚರಿಕೆ ಹೆಜ್ಜೆ ಇಡಬೇಕು.ಚೀನಾ ಆಕ್ರಮಣಕಾರಿ ಮನೋಭಾವ ಹೊಂದಿದೆ. ಪ್ರತಿ ದಿನ ಚೀನಾ ಅತಿಕ್ರಮಣ ಮಾಡುವತ್ತಲೇ ಗಮನಹರಿಸುತ್ತದೆ. ಹೀಗಾಗಿ ಭಾರತ ಅತೀವ ಎಚ್ಚರಿಕೆಯಿಂದ ಇರಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.