ಮೆಗಾಸ್ಟಾರ್ ಚಿರಂಜೀವಿ ನಟನೆಯ ಇತ್ತೀಚಿನ ಸಿನಿಮಾಗಳು ಸೋಲು ಕಾಣುತ್ತಿವೆ. ಬ್ಯಾಕ್ ಟು ಬ್ಯಾಕ್ ಫ್ಲಾಪ್ ಸಿನಿಮಾಗಳನ್ನೇ ನೀಡುತ್ತಿರುವ ಚಿರಂಜೀವಿ ಇದೀಗ ಅಭಿಮಾನಿಗಳ ಬೇಡಿಕೆಗೆ ಸ್ಪಂದಿಸಿದ್ದಾರೆ. ಇಷ್ಟು ದಿನಗಳ ಕಾಲ ಹಳೆಯ ಕಾಲದ ಮಾದರಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಚಿರಂಜೀವಿ ಇದೀಗ ಹೊಸ ಮಾದರಿಯ ಸಿನಿಮಾಗಳತ್ತ ಗಮನ ಹರಿಸಿದ್ದಾರೆ.
ನಾನಿ ನಟನೆಯ ‘ದಸರಾ’ ಸಿನಿಮಾ ನಿರ್ದೇಶಿಸಿ ಗಮನ ಸೆಳೆದಿರುವ ನಿರ್ದೆಶಕ ಶ್ರೀಕಾಂತ್ ಒಡೆಲ ನಿರ್ದೇಶನದ ಹೊಸ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟಿಸಲಿದ್ದಾರೆ. ವಿಶೇಷವೆಂದರೆ ಈ ಸಿನಿಮಾಕ್ಕೆ ನಟ ನಾನಿ ಬಂಡವಾಳ ಹೂಡುವುದರ ಜೊತೆಗೆ ಸಣ್ಣದೊಂದು ಪಾತ್ರ ಮಾಡುತ್ತಿದ್ದಾರೆ. ಇದೀಗ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ಪೋಸ್ಟರ್ ಗಮನ ಸೆಳೆಯುತ್ತಿದೆ. ಪಕ್ಕಾ ವಯಲೆನ್ಸ್ ಇರುವ ಕತೆಯನ್ನು ಸಿನಿಮಾ ಒಳಗೊಂಡಿರುವುದು ಪೋಸ್ಟರ್ನಿಂದ ತಿಳಿದು ಬರುತ್ತಿದೆ.
ಮೆಗಾಸ್ಟಾರ್ ಚಿರಂಜೀವಿ ಮತ್ತು ನಿರ್ದೇಶಕ ಶ್ರೀಕಾಂತ್ ಒಡೆಲ ಇಬ್ಬರೂ ಕೈಯನ್ನು ರಕ್ತದಲ್ಲಿ ಅದ್ದಿ ಪರಸ್ಪರ ಕೈ ಹಿಡಿದುಕೊಂಡು ಚಿತ್ರವನ್ನು ಹಂಚಿಕೊಂಡಿದ್ದಾರೆ. ‘ಇದು ರಕ್ತದಲ್ಲಿ ಮಾಡಿದ ಪ್ರತಿಜ್ಞೆ’ ಎಂಬ ಅಡಿಬರಹ ಕೊಟ್ಟಿದ್ದಾರೆ. ಸಿನಿಮಾದ ಪೋಸ್ಟರ್ನಲ್ಲಿ ಸಹ ‘ಇವನಿಗೆ ಶಾಂತಿ ಸಿಗುವುದು ಹಿಂಸೆಯಲ್ಲೇ’ ಎಂಬ ಸಾಲು ಬರೆಯಲಾಗಿದೆ. ರಕ್ತದ ಮೆತ್ತಿದ ಕೈನ ಚಿತ್ರ ಪೋಸ್ಟರ್ನಲ್ಲಿದೆ. ನಟ ನಾನಿ, ಶ್ರೀಕಾಂತ್ ಒಡೆಲ ಹಾಗೂ ಮೆಗಾಸ್ಟಾರ್ ಚಿರಂಜೀವಿ ಒಟ್ಟಿಗಿರುವ ಚಿತ್ರವೊಂದನ್ನು ಸಹ ಚಿರಂಜೀವಿ ಹಂಚಿಕೊಂಡಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ.
ಸದ್ಯ ಚಿರಂಜೀವಿ ‘ವಿಶ್ವಂಭರಮ್’ ಸಿನಿಮಾನಲ್ಲಿ ನಟಿಸುತ್ತಿದ್ದು, ಮಲ್ಲಿಡಿ ವಸಿಷ್ಠ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಅತೀಂದ್ರಿಯ ಶಕ್ತಿಯ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ತ್ರಿಷಾ ನಾಯಕಿ. ಪ್ರಭಾಸ್ ಮಾಲೀಕತ್ವದ ಯುವಿ ಕ್ರಿಯೇಶನ್ಸ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದೆ. ಸಿನಿಮಾದ ಚಿತ್ರೀಕರಣ ಇನ್ನೇನು ಮುಗಿದಿದ್ದು, ಇದಾದ ಬಳಿಕ ಮಾಸ್ ನಿರ್ದೇಶಕ ಬೊಯಪಾಟಿ ಶ್ರೀನು ನಿರ್ದೇಶನದ ಸಿನಿಮಾ ಒಂದರಲ್ಲಿ ಚಿರಂಜೀವಿ ನಟಿಸಲಿದ್ದಾರೆ. ಆ ಸಿನಿಮಾದ ಬಳಿಕವಷ್ಟೆ ಶ್ರೀಕಾಂತ್ ಒಡೆಲ ನಿರ್ದೇಶನದ ಸಿನಿಮಾ ಪ್ರಾರಂಭವಾಗಲಿದೆ.