ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಜನರು ಅಕ್ಷರಶಃ ಭೀದಿಗೆ ಬಿದ್ದಿದ್ದಾರೆ. ಘಟನೆಯಲ್ಲಿ ಇದುವರೆಗೂ 300ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದು ಸಾಕಷ್ಟು ಮಂದಿ ನಾಪತ್ತೆಯಾಗಿದ್ದಾರೆ. ಭೂಕುಸಿತದ ಸಂತ್ರಸ್ತರಿಗೆ ನೆರವಿನ ಅವಶ್ಯಕತೆ ಇದ್ದು, ಇದೀಗ ‘ಮೆಗಾ ಸ್ಟಾರ್’ ಚಿರಂಜೀವಿ ಹಾಗೂ ರಾಮ್ ಚರಣ್ ಜೊತೆಯಾಗಿ 1 ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ಚಿರಂಜೀವಿ, ‘ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಪಕೃತಿಯ ವಿಕೋಪಕ್ಕೆ ನೂರಾರು ಜನರು ಪ್ರಾಣ ಕಳೆದಕೊಂಡಿದ್ದಕ್ಕೆ ತೀವ್ರ ನೋವು ಉಂಟಾಗಿದೆ. ವಯನಾಡು ದುರಂತದ ಸಂತ್ರಸ್ತರಿಗಾಗಿ ನನ್ನ ಮನ ಮಿಡಿಯುತ್ತಿದೆ. ಚರಣ್ ಮತ್ತು ನಾನು ಜೊತೆಯಾಗಿ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಸಂತ್ರಸ್ತರ ಬೆಂಬಲಕ್ಕೆ ನಿಲ್ಲುತ್ತೇವೆ. ನೋವಿನಲ್ಲಿ ಇರುವ ಎಲ್ಲರಿಗಾಗಿ ನಾನು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.
ಚಿತ್ರರಂಗದ ಅನೇಕ ಕಲಾವಿಧರು ದೇಣಿಗೆ ನೀಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರು 25 ಲಕ್ಷ ರೂಪಾಯಿ ನೀಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು 10 ಲಕ್ಷ ರೂಪಾಯಿ ನೀಡಿದ್ದಾರೆ. ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ಲಾಲ್ ಅವರು 3 ಕೋಟಿ ರೂಪಾಯಿ ನೀಡುತ್ತಿದ್ದಾರೆ. ಮಮ್ಮುಟ್ಟಿ ಮತ್ತು ದುಲ್ಖರ್ ಸಲ್ಮಾನ್ ಅವರು ಜೊತೆಯಾಗಿ 35 ಲಕ್ಷ ರೂಪಾಯಿ ನೀಡಿದ್ದಾರೆ.
ಫಹಾದ್ ಫಾಸಿಲ್, ನಜ್ರಿಯಾ ನಜೀಮ್, ಸೂರ್ಯ, ಕಾರ್ತಿ, ಜ್ಯೋತಿಕಾ, ಚಿಯಾನ್ ವಿಕ್ರಮ್ ಸೇರಿದಂತೆ ಅನೇಕರು ವಯನಾಡು ಭೂಕುಸಿತದ ಸಂತ್ರಸ್ತರಿಗೆ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.