ಬೆಂಗಳೂರು:- ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಲರಾ ಪ್ರಕರಣಗಳು ಶೇ 50 ರಷ್ಟು ಏರಿಕೆಯಾಗಿದ್ದು, ದಿನಕ್ಕೆ ಸರಾಸರಿ ಕನಿಷ್ಠ 20 ಪ್ರಕರಣಗಳು ವರದಿಯಾಗಿವೆ. ಕಳಪೆ ನೈರ್ಮಲ್ಯ ಮತ್ತು ಕಲುಷಿತ ನೀರಿನ ಮೂಲಗಳು ನಗರದಲ್ಲಿ ಕಾಲರಾ ಪ್ರಕರಣಗಳ ಉಲ್ಬಣಕ್ಕೆ ಮುಖ್ಯ ಕಾರಣಗಳಾಗಿವೆ ಎಂದು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯ ಕನ್ಸಲ್ಟೆಂಟ್ ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಶ್ರೀಹರಿ ಡಿ ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ
ಸಣ್ಣಪುಟ್ಟ ದರ್ಶಿನಿಗಳು, ರಸ್ತೆ ಬದಿಯ ತಳ್ಳುಗಾಡಿಗಳಲ್ಲಿ ಆಹಾರ ಸೇವಿಸಿದವರಲ್ಲಿ ಕಾಲರಾ ಪ್ರಕರಣಗಳು ಪತ್ತೆಯಾಗುತ್ತಿವೆ. ತೀವ್ರವಾದ ನೀರಿನ ಕೊರತೆಯಿಂದ ಈ ಸಣ್ಣಪುಟ್ಟ ವ್ಯಾಪಾರಿಗಳು ಕಲುಷಿತ ನೀರನ್ನು ಅಡುಗೆಗೆ ಬಳಸಿರುವ ಸಾಧ್ಯತೆ ಇದೆ. ಹೀಗಾಗಿ ಸೋಕು ಹರಡುವಿಕೆ ಉಲ್ಬಣಗೊಳ್ಳುತ್ತಿರಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಲ್ಲೇಶ್ವರಂ ಪ್ರದೇಶದಲ್ಲಿ ಕಾಲರಾ ಪ್ರಕರಣ ದೃಢಪಟ್ಟಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ‘ಬ್ಯುಸಿನೆಸ್ ಸ್ಟಾಂಡರ್ಡ್’ಗೆ ಮಾಹಿತಿ ನೀಡಿದ್ದಾರೆ. ಮಲ್ಲೇಶ್ವರಂನ ಪಿಜಿಯಲ್ಲಿ ಒಂದು ಪ್ರಕರಣದಲ್ಲಿ ಕಾಲರಾ ಪಾಸಿಟಿವ್ ಬಂದಿದ್ದು, ಇತರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ಮಾಲಿನ್ಯದ ಮೂಲವನ್ನು ಮತ್ತು ಎಲ್ಲವನ್ನು ಗುರುತಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಕಾಲರಾ ತಡೆಗಟ್ಟಲು ಏನು ಮಾಡಬಹುದು?
ಕಾಲರಾ ಬಾರದಂತೆ ತಡೆಯಲು ಮೊದಲನೆಯದಾಗಿ, ಕುಡಿಯುವ ನೀರಿನ ನೈರ್ಮಲ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಶುದ್ಧೀಕರಿಸಿದ ಅಥವಾ ಚೆನ್ನಾಗಿ ಕುದಿಸಿದ ನೀರನ್ನೇ ಕುಡಿಯಬೇಕು.
ಸಾಬೂನು ಮತ್ತು ನೀರಿನಿಂದ ಕೈ ತೊಳೆಯುವುದು, ವಿಶೇಷವಾಗಿ ಊಟ ಅಥವಾ ಅಡುಗೆ ಮಾಡುವ ಮೊದಲು ಎಲ್ಲರೂ ನೈರ್ಮಲ್ಯದ ಅಭ್ಯಾಸಗಳನ್ನು ಅನುಸರಿಸಬೇಕು.