ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಫೆಡರಲ್ ಕ್ರಿಮಿನಲ್ ಆರೋಪಗಳನ್ನು ಹೊರಿಸಿರುವ ನ್ಯಾಯಾಂಗ ಇಲಾಖೆಯು ಕಾನೂನುಬದ್ಧವಾಗಿ ಮತ್ತು ರಾಜಕೀಯವಾಗಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಅಧಿಕಾರ ಕಳೆದುಕೊಂಡ ಬಳಿಕ ತಮ್ಮೊಂದಿಗೆ ತೆಗೆದುಕೊಂಡು ಹೋದ ವರ್ಗೀಕೃತ ದಾಖಲೆಗಳ ನಿರ್ವಹಣೆ ಮತ್ತು ಅವುಗಳನ್ನು ಹಿಂಪಡೆಯಲು ಸರ್ಕಾರದ ಪ್ರಯತ್ನಗಳಿಗೆ ಅಡ್ಡಿಪಡಿಸಿದ್ದಾರೆಯೇ ಎಂಬ ಕುರಿತು ನಡೆದ ಸುದೀರ್ಘ ತನಿಖೆಯ ಆಧಾರದ ಮೇಲೆ ಟ್ರಂಪ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.
ವಿಶೇಷ ಅಭಿಯೋಜಕ ಜಾಕ್ ಸ್ಮಿತ್ ಅವರ ಕಚೇರಿಯಿಂದ ಮಿಯಾಮಿ ಜಿಲ್ಲಾ ನ್ಯಾಯಾಲಯದಲ್ಲಿ ದೋಷಾರೋಪಪಟ್ಟಿ ಸಲ್ಲಿಸಲಾಗಿದ್ದು, ಅಮೆರಿಕದ ಇತಿಹಾಸದಲ್ಲಿ ಮೊದಲ ಬಾರಿಗೆ ಮಾಜಿ ಅಧ್ಯಕ್ಷರೊಬ್ಬರು ಫೆಡರಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಟ್ರಂಪ್ ಮಾಜಿ ಅಧ್ಯಕ್ಷರಷ್ಟೇ ಅಲ್ಲ. 2024ರ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಗಾದಿಗೆ ಸ್ಪರ್ಧೆ ಮಾಡುವ ಮೂಲಕ ಅಧ್ಯಕ್ಷ ಜೋ ಬೈಡನ್ ಅವರನ್ನು ಎದುರಿಸಲು ಮುಂಚೂಣಿಯಲ್ಲಿರುವವರಾಗಿದ್ದಾರೆ, ಬೈಡನ್ ಆಡಳಿತವು ಈಗ ಅವರ ಸಂಭಾವ್ಯ ಪ್ರತಿಸ್ಪರ್ಧಿಯನ್ನು ಶಿಕ್ಷಿಸಲು ಪ್ರಯತ್ನಿಸುತ್ತಿದೆ ಎಂಬ ಸಂಶಯವನ್ನೂ ಮೂಡಿಸಬಹುದು.
ಗೂಢಚರ್ಯೆ ಕಾಯಿದೆಯನ್ನು ಉಲ್ಲಂಘಿಸಿ ಉದ್ದೇಶಪೂರ್ವಕವಾಗಿ ರಾಷ್ಟ್ರೀಯ ರಕ್ಷಣಾ ರಹಸ್ಯಗಳನ್ನು ಉಳಿಸಿಕೊಂಡಿರುವುದು, ಸುಳ್ಳು ಹೇಳಿಕೆಗಳನ್ನು ನೀಡುವುದು ಸೇರಿದಂತೆ ಒಟ್ಟು ಏಳು ಆರೋಪಗಳನ್ನು ಟ್ರಂಪ್ ವಿರುದ್ಧ ಹೊರಿಸಲಾಗಿದೆ.
ತಮ್ಮ ನಡುವಿನ ಸಂಬಂಧ ಬಹಿರಂಗಪಡಿಸದಂತೆ 2016ಕ್ಕೂ ಮುನ್ನ ಪೋರ್ನ್ ಸ್ಟಾರ್ಗೆ ಹಣ ನೀಡಿದ ಪ್ರಕರಣದಲ್ಲಿ ಟ್ರಂಪ್ ವಿರುದ್ಧ 30ಕ್ಕೂ ಹೆಚ್ಚು ಅಪರಾಧ ಆರೋಪಗಳನ್ನು ದಾಖಲಿಸಿದ ಎರಡು ತಿಂಗಳ ನಂತರ ಮತ್ತೊಂದು ಆರೋಪ ಹೊರಿಸಲಾಗಿದೆ.
ಜನವರಿ 6, 2021ರ ಕ್ಯಾಪಿಟಲ್ ಭವನದ ಮೇಲಿನ ದಾಳಿ ಸೇರಿದಂತೆ 2020ರಲ್ಲಿ ಚುನಾವಣಾ ಸೋಲಿನ ನಂತರ ಮತ್ತೆ ಅಧಿಕಾರ ಪಡೆಯಲು ಟ್ರಂಪ್ ಅವರು ನಡೆಸುತ್ತಿರುವ ವ್ಯಾಪಕ ಪ್ರಯತ್ನಗಳ ಕುರಿತಂತೆಯೂ ಸ್ಮಿತ್ ತನಿಖೆ ನಡೆಸುತ್ತಿದ್ದಾರೆ.