ಬೆಂಗಳೂರು: ಶುಚಿತ್ವದ ಕೆಲಸ ಮಾಡುವ ಕಾರ್ಮಿಕರನ್ನು ಉದ್ಯೋಗಿಗಳೆಂದು ಪರಿಗಣಿಸಿ ಎಂದು ಬೆಂಗಳೂರಿನ ಹೈಕೋರ್ಟ್ ಅಭಿಪ್ರಾಯಪಟ್ಟದೆ. ಸರ್ಕಾರದ ಅಧೀನದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಶುಚಿತ್ವದ ಕೆಲಸ ಕೆಲ ಗಂಟೆಗಳ ಕಾಲ ಇರುತ್ತದೆಯಾದರೂ ದಿನ ನಿತ್ಯದ ಕೆಲಸವಾಗಿದ್ದು, ತಿಂಗಳಾಂತ್ಯದ ವರೆಗೂ ನಡೆಯುತ್ತಿರುತ್ತದೆ. ಜತೆಗೆ ದೀರ್ಘಕಾಲಿಕವಾಗಿದೆ. ಆದರೆ, ತಾತ್ಕಾಲಿಕವಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಉದ್ಯೋಗದಾತ ಮತ್ತು ಗುತ್ತಿಗೆದಾರರ ನಡುವಿನ ಒಪ್ಪಂದ ಕೇವಲ ನೆಪ ಮಾತ್ರವಾಗಿದೆ. ಕಾರ್ಮಿಕರು ಸುಧೀರ್ಘ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಗುತ್ತಿಗೆ ಕಾರ್ಮಿಕರು ಎಂದು ತಿಳಿಸಿ ಕಾರ್ಮಿಕರನ್ನು ವಂಚಿಸುವ ತಂತ್ರವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ. ಜತೆಗೆ, ಕಾರ್ಮಿಕರನ್ನು ನೌಕರರು ಎಂದು ಪರಿಗಣಿಸಿ ಮರು ನೇಮಕ ಮಾಡಿಕೊಳ್ಳಬೇಕು. ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಬೇಕು. ಯಾವುದೇ ಹುದ್ದೆ ಖಾಲಿ ಇಲ್ಲದಿದ್ದಲ್ಲಿ ಹುದ್ದೆಗಳು ಖಾಲಿಯಾದಲ್ಲಿ ಬಳಿಕ ಭರ್ತಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿ ಅರ್ಜಿ ಇತ್ಯರ್ಥ ಪಡಿಸಿದೆ.