ಬೆಂಗಳೂರು: ಕೋಲಾರದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನ ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ ಮಾಡಿಸಿರುವ ಅಮಾನವೀಯ ಘಟನೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹಾದೇವಪ್ಪ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನನಗೂ ಬೆಳಗ್ಗೆ ವಿಷಯ ತಿಳಿಯಿತು. ಪ್ರಿನ್ಸಿಪಾಲ್ ಸೆಕ್ರೆಟರಿ ಮಣಿವಣ್ಣನ್ ಅವರೊಂದಿಗೆ ಮಾತನಾಡಿ, ಶಾಲೆಯ ಪ್ರಾಂಶುಪಾಲರು, ವಾರ್ಡನ್ ಹಾಗೂ ಡಿ.ಗ್ರೂಪ್ ನೌಕರ ಎಲ್ಲರನ್ನೂ ಅಮಾನತು ಮಾಡಲು ಸೂಚನೆ ನೀಡಿದ್ದೇನೆ. ಸಮಾಜ ಕಲ್ಯಾಣ ಇಲಾಖೆಯಿಂದ ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಡಿ.ಗ್ರೂಪ್ ನೌಕರ ಮಾಡಿರುವ ಕೆಲಸ ಎಂದಿದ್ದಾರೆ. ಆದ್ರೆ ಪ್ರಾಂಶುಪಾಲರು ಹಾಗೂ ವಾರ್ಡನ್ ಸಹ ಇದಕ್ಕೆ ಜವಬ್ದಾರಿ. ಮಕ್ಕಳೇ ಆಗಲಿ, ಯಾರೇ ಆಗಲಿ ಇನ್ನೊಬ್ಬರ ಮಲ ಸ್ವಚ್ಛ ಮಾಡುವುದು ಸರಿಯಲ್ಲ. ಇದು ಅಕ್ಷಮ್ಯ ಅಪರಾಧ. ಇಲಾಖೆಯಿಂದ ಹೆಚ್ಚಿನ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ