ಶ್ರೀನಗರ: ಇತ್ತೀಚೆಗೆ ಪೂಂಚ್ನಲ್ಲಿ ಭಾರತೀಯ ವಾಯುಪಡೆಯ ಬೆಂಗಾವಲು ವಾಹನದ ಮೇಲೆ ನಡೆದ ದಾಳಿಗೆ ಹೊಣೆಗಾರರಾಗಿರುವ ಮೂವರು ಪಾಕಿಸ್ತಾನಿ ಭಯೋತ್ಪಾದಕರ ಫೋಟೋಗಳನ್ನು ಭಾರತೀಯ ವಾಯುಪಡೆಯ (IAF) ಅಧಿಕಾರಿಗಳು ಹಂಚಿಕೊಂಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ಭಯೋತ್ಪಾದಕರ ಚಿತ್ರಗಳನ್ನು ಭದ್ರತಾ ಪಡೆ ಹಂಚಿಕೊಂಡಿದೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಮೂವರು ಭಯೋತ್ಪಾದಕರು ಆಕ್ರಮಣಕಾರಿ ರೈಫಲ್ಗಳನ್ನು ಹಿಡಿದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಯುಎಸ್ ನಿರ್ಮಿತ M4 ಮತ್ತು ರಷ್ಯಾ ನಿರ್ಮಿತ AK-47 ರೈಫಲ್ಗಳನ್ನು ಹಿಡಿದೊಯ್ಯುತ್ತಿರುವುದು ಕಂಡುಬಂದಿದೆ. ಅಲ್ಲದೇ ಇದು ಈ ವರ್ಷದಲ್ಲಿ ಮಿಲಿಟರಿಯನ್ನು ಗುರಿಯಾಗಿಸಿ ನಡೆಸಿದ ಪ್ರಮುಖ ದಾಳಿಯೂ ಆಗಿದೆ. ಕಳೆದ ವರ್ಷ ಸೈನಿಕರನ್ನ ಗುರಿಯಾಗಿಸಿ ಪ್ರಮುಖ ದಾಳಿಗಳು ನಡೆದಿದ್ದವು ಎಂದು ಭದ್ರತಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾದ ಮೂವರು ಪಾಕಿಸ್ತಾನದ ಉಗ್ರರು ಎಂದು ಅಧಿಕಾರಿಗಳು ಹೇಳಿದ್ದಾರೆ. ಪಾಕ್ ಸೇನೆಯ ಮಾಜಿ ಕಮಾಂಡೊ ಇಲಿಯಾಸ್, ಲಷ್ಕರ್ ಕಮಾಂಡರ್ ಅಬು ಹಮ್ಜಾ ಮತ್ತು ಹಾಡೂನ್ ಎಂದು ಗುರುತಿಸಲಾಗಿದೆ. ಭಯೋತ್ಪಾದಕ ಹಮ್ಜಾ 30-32 ವರ್ಷ ವಯಸ್ಸಿನವನು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅಂದಾಜಿಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಕಳೆದ ವಾರವಷ್ಟೇ ಪೂಂಚ್ನ ಶಾಸಿತಾರ್ ಬಳಿ ಐಎಎಫ್ ಬೆಂಗಾವಲು ಪಡೆಯ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಐಎಎಫ್ ಕಾರ್ಪೋರಲ್ ವಿಕ್ಕಿ ಪಹಾಡೆ ಪ್ರಾಣ ಕಳೆದುಕೊಂಡಿದ್ದರು. ಅಲ್ಲದೇ ಘಟನೆಯಲ್ಲಿ ನಾಲ್ವರು ಸೈನಿಕರು ಗಾಯಗೊಂಡಿದ್ದರು.
ದಾಳಿಯ ಬಳಿಕ ಶಾಸಿತಾರ್ ಪ್ರದೇಶದಲ್ಲಿ ಸಶಸ್ತ್ರ ಪಡೆಗಳು ಮಹತ್ವದ ಶೋಧಕಾರ್ಯ ನಡೆಸಿದವು. ಈ ಸಂಬಂಧ ತನಿಖೆ ನಡೆಸುತ್ತಿದ್ದ ಭದ್ರತಾಪಡೆಯ ಅಧಿಕಾರಿಗಳು ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರ ರೇಖಾಚಿತ್ರಗಳನ್ನೂ ಬಹಿರಂಗಪಡಿಸಿದ್ದರು. ಶಂಕಿತ ಉಗ್ರರ ಬಂಧನಕ್ಕೆ ನೆರವಾಗುವ ಯಾವುದೇ ಮಾಹಿತಿ ನೀಡಿದವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಭದ್ರತಾ ಪಡೆ ಘೋಷಿಸಿತ್ತು.