ಕನ್ನಡದ ಖ್ಯಾತ ನಟ ಅಂಬರೀಶ್ ಅವರ ಹೆಸರನ್ನು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಇಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ ಹರೀಶ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದೇ ವಾರದಲ್ಲೇ ಹೆಸರು ಇಡುವ ಕಾರ್ಯಕ್ರಮ ಕೂಡ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರನ್ನು ಇಡುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಸರಕಾರಕ್ಕೆ ಮನವಿ ಮಾಡಿತ್ತು. ಮಂಡಳಿಯ ಮನವಿಗೆ ಸ್ಪಂದಿಸಿರುವ ಸರಕಾರ ಇದೇ ವಾರದಲ್ಲೇ ಹೆಸರು ಇಡುವ ಒಪ್ಪಿಗೆ ಕೂಡ ನೀಡಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಹಲವು ದಿನಗಳ ಬೇಡಿಕೆ ಈಡೇರಿದಂತಾಗಿದೆ.
ಕನ್ನಡ ಚಿತ್ರ ಜಗತ್ತಿಗೆ ಅಂಬರೀಶ್ ಕೊಟ್ಟಿರುವ ಕೊಡುಗೆ ಅಪಾರ. ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಸಾಕಷ್ಟು ಸಹಾಯವನ್ನೂ ಅಂಬರೀಶ್ ಮಾಡಿದ್ದಾರೆ. ರಾಜಕಾರಣಿಯಾಗಿಯೂ ಅವರು ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದಾರೆ. ಈ ಎಲ್ಲ ಸೇವೆಯನ್ನು ಪರಿಗಣಿಸಿರುವ ಸರಕಾರ ರೇಸ್ ಕೋರ್ಸ್ ರಸ್ತೆಗೆ ಹೆಸರು ಇಡಲು ಒಪ್ಪಿಗೆ ನೀಡಿದೆ.
ಅಷ್ಟೇ ಅಲ್ಲದೇ, ಅಂಬರೀಶ್ ಸ್ಮಾರಕದ ಕೆಲಸ ಕೂಡ ಬಹುತೇಕ ಮುಗಿದಿದ್ದು, ಅತೀ ಶೀಘ್ರದಲ್ಲೇ ಸ್ಮಾರಕದ ಲೋಕಾರ್ಪಣೆ ಕೂಡ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಸ್ಮಾರಕವು ಹಲವು ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾಗಿದೆ. ಡಾ.ರಾಜ್ ಕುಮಾರ್ ಸ್ಮಾರಕದ ಪಕ್ಕದಲ್ಲೇ ಅಂಬರೀಶ್ ಸ್ಮಾರಕ ಕೂಡ ತಲೆಯೆತ್ತಿದೆ.