ನವದೆಹಲಿ: ಹಿರಣ್ಯಕಶಿಪು ಮತ್ತು ಪ್ರಹ್ಲಾದನ ಪೌರಾಣಿಕ ಪ್ರಸಂಗಗಳೊಂದಿಗೆ ಇತ್ತೀಚಿನ ಘಟನೆಗಳನ್ನು ಹೋಲಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ದೇಶ ಮತ್ತು ಮಕ್ಕಳ ಸೇವೆ ಮಾಡುವವರನ್ನು ಕಂಬಿಯ ಹಿಂದೆ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ. ದೆಹಲಿಯ ಅಬಕಾರಿ ನೀತಿ ಜಾರಿ ಪ್ರಕರಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಬಂಧಿಸಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
ಯಾರನ್ನೂ ಹೆಸರಿಸದೆ, ಹಿರಣ್ಯಕಶಿಪು ಹೇಗೆ ದೇವರನ್ನು ಪೂಜಿಸುವುದನ್ನು ತಡೆಯಲು ಸಾಧ್ಯವಿಲ್ಲವೋ ಹಾಗೆಯೇ ಆಧುನಿಕ ಪ್ರಹ್ಲಾದನನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅವರು ತಮ್ಮ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಪ್ರಹ್ಲಾದ ಎಂದು ಉಲ್ಲೇಖಿಸಿದ್ದಾರೆ. ಹಿರಣ್ಯಕಶಿಪು ತನ್ನನ್ನು ತಾನು ದೇವರೆಂದು ಪರಿಗಣಿಸಲು ಪ್ರಾರಂಭಿಸಿದನು. ಪ್ರಹ್ಲಾದ ದೇವರ ಮಾರ್ಗದಲ್ಲಿ ನಡೆಯದಂತೆ ತಡೆಯಲು ಹಲವಾರು ಪ್ರಯತ್ನಗಳನ್ನು ಮಾಡಿ ಅವನ ಮೇಲೆ ದೌರ್ಜನ್ಯ ಎಸಗಿದನು. ಇಂದಿಗೂ ಕೆಲವರು ತಮ್ಮನ್ನು ತಾವು ದೇವರೆಂದು ಪರಿಗಣಿಸಲು ಆರಂಭಿಸಿದ್ದಾರೆ. ದೇಶ ಮತ್ತು ಮಕ್ಕಳ ಸೇವೆ ಮಾಡುತ್ತಿರುವ ಪ್ರಹ್ಲಾದನನ್ನು ಜೈಲಿಗೆ ಹಾಕಲಾಗಿದೆ ಎಂದು ಆರೋಪಿಸಿದರು.