ಇಂದಿನಿಂದ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸಿಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಪಂದ್ಯವನ್ನು ವೀಕ್ಷಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಸಂಜೆ ಆಗಮಿಸಿದರು. ಇಂದು ಅಧಿವೇಶನದ ಕೊನೆಯ ದಿನವಾಗಿದ್ದರೂ, ಅಧಿವೇಶನ ಮುಗಿಸಿಕೊಂಡು ಅವರು ಕ್ರೀಡಾಂಗಣದಲ್ಲಿ ಹಾಜರಿದ್ದರು. ಜೊತೆಗೆ ಆರೋಗ್ಯ ಸಚಿವ ಆರ್.ಸುಧಾಕರ್ ಅವರನ್ನೂ ಕರೆತಂದಿದ್ದರು.
ಮುಖ್ಯಮಂತ್ರಿಗಳು ಆರು ತಂಡಗಳ ಸದಸ್ಯರನ್ನು ಪರಿಚಯಿಸಿಕೊಂಡು, ಕೆಲಹೊತ್ತು ಕ್ರಿಕೆಟ್ (Cricket) ವೀಕ್ಷಿಸಿದರು. ನಂತರ ಅಲ್ಲಿಂದ ತೆರಳಿದರು. ಈ ಸಂದರ್ಭದಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ರವಿಚಂದ್ರನ್, ಲಹರಿ ವೇಲು ಕ್ರಿಕೆಟ್ ತಂಡಗಳು ಸದಸ್ಯರು ಹಾಜರಿದ್ದರು. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಈ ಪಂದ್ಯ ನಡೆಯಲಿದೆ. ಕನ್ನಡ ಸಿನಿಮಾ ರಂಗದ ಗಣ್ಯರ ಜೊತೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಕೂಡ ಈ ಪಂದ್ಯದಲ್ಲಿ ಭಾಗಿಯಾಗಿದ್ದಾರೆ
ಇಂದು ಒಟ್ಟು ಮೂರು ಪಂದ್ಯಗಳು ಆಯೋಜನೆಯಾಗಿದ್ದು, ಮೊದಲ ಪಂದ್ಯವಾಗಿ ಕಿಚ್ಚ ಸುದೀಪ್ ನೇತೃತ್ವದ ತಂಡದೊಂದಿಗೆ ಡಾಲಿ ಧನಂಜಯ್ ಟೀಮ್ ಸೆಣಸಲಿದೆ. ನಂತರ ಶಿವರಾಜ್ ಕುಮಾರ್ ಮತ್ತು ಸುದೀಪ್ ನೇತೃತ್ವದ ತಂಡಗಳು ಎದುರಾಗಲಿವೆ. ಮೂರನೇ ಪಂದ್ಯವಾಗಿ ಗಣೇಶ್ ಮತ್ತು ಧ್ರುವ ಸರ್ಜಾ ಟೀಮ್ ಮೈದಾನಕ್ಕೆ ಇಳಿಯಲಿವೆ.