ಬೆಂಗಳೂರು: ಟೆಂಡರ್ ಪ್ರಕ್ರಿಯೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರ ಅಕ್ರಮ ಎಸಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು,ಬೊಮ್ಮಾಯಿ ಸರ್ಕಾರ ಟೆಂಡರ್ಗಳಲ್ಲಿ 40% ಕಮಿಷನ್ ಪಡೆಯಲು ಕಾನೂನುಬಾಹಿರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೆಲ್ಲವನ್ನು ನೋಡಿ ಸುಮ್ಮನೆ ಕೂತಿರುವ ಚುನಾವಣಾ ಆಯೋಗದ ಮೇಲೆ ನಂಬಿಕೆ ಕುಗ್ಗಿವೆ. ಈ ವಿಚಾರವಾಗಿ ಕಾಂಗ್ರೆಸ್ ಪಕ್ಷ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಇನ್ನೂ ಚುನಾವಣೆ ದಿನಾಂಕ ಘೋಷಿಸುವ ಮುನ್ನ ಅನೇಕ ಟೆಂಡರ್ ಗಳನ್ನು ಸಮರ್ಪಕ ಪ್ರಕ್ರಿಯೆ ಮೂಲಕ ಹೊರಡಿಸಿಲ್ಲ. ಟೆಂಡರ್ ಅಂದಾಜು ಮೊತ್ತ, ಕಾಲಾವಧಿ ನಿಗದಿಯಾಗದೇ ಟೆಂಡರ್ ನೀಡಲಾಗಿದೆ. ಇಲಾಖೆವಾರು ಕಾಮಗಾರಿ ವೆಚ್ಚದ ಪರಿಶೀಲನೆ ಇಲ್ಲದೆ ಟೆಂಡರ್ ನೀಡಲಾಗಿದೆ. ಬೊಮ್ಮಾಯಿ ಸರ್ಕಾರ ಕೇವಲ 40% ಕಮಿಷನ್ ಪಡೆಯುವ ಏಕಮಾತ್ರ ಉದ್ದೇಶದಿಂದ ಈ ರೀತಿ ಅಕ್ರಮವಾಗಿ ಟೆಂಡರ್ ನೀಡಲಾಗಿದೆ. ಈ ವಿಚಾರವಾಗಿ ರಾಜ್ಯ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಈ ದೂರಿನಲ್ಲಿ ಕೆಲವು ಟೆಂಡರ್ ಗಳ ಉಲ್ಲೇಖವನ್ನು ಮಮಾಡಲಾಗಿದೆ ಎಂದು ಹೇಳಿದ್ದಾರೆ.