ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘ ಯೋಜನೆಗೆ ಮಾರ್ಚ್ 23 ರಂದು ಚಾಲನೆ ನೀಡಲಿದ್ದಾರೆ. . ಈ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಸಂಘಗಳ ರಚನೆಯ ಪ್ರಗತಿಯ ಕುರಿತು ಸಿಎಂ ಮಾಹಿತಿ ಪಡೆದರು. ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಬಹಳ ವರ್ಷಗಳಿಂದ ಸಕ್ರಿಯವಾಗಿವೆ. ಆದರೆ ಯುವಕರಿಗಾಗಿ ಮೊದಲ ಬಾರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಇಂತಹ ಯೋಜನೆಯನ್ನು ರೂಪಿಸಲಾಗಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೆಚ್ಚಿನ ಆದ್ಯತೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.
ಜಂಟಿ ಬಾಧ್ಯತಾ ಗುಂಪುಗಳ ರಚನೆಯಾಗಿ, ಸುತ್ತು ನಿಧಿ ಹಂಚಿಕೆಯೊಂದಿಗೆ ನಿಮ್ಮ ಕೆಲಸ ಮುಗಿಯುವುದಿಲ್ಲ. ಈ ಗುಂಪುಗಳು ಯೋಜನೆಯನ್ನು ಗುರುತಿಸಿ, ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದು, ತಮ್ಮ ಉದ್ದಿಮೆಯನ್ನು ಸ್ಥಾಪಿಸಿ, ಉತ್ಪಾದನೆ ಪ್ರಾರಂಭಿಸುವ ವರೆಗೂ ನೀವು ಅವರಿಗೆ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಸೂಚಿಸಿದರು. ಯೋಜನೆಗಳನ್ನು ಗುರುತಿಸಲು ನಿಯೋಜಿಸಿರುವ ಸಮಾಲೋಚಕರು, ಯುವಕರು ಕೈಗೊಳ್ಳುವ ಯೋಜನೆಗೆ ಅನುಗುಣವಾಗಿ, ಆಯಾ ಕ್ಷೇತ್ರದ ಪರಿಣತರಿಂದಲೇ ತರಬೇತಿ ನೀಡಬೇಕು. ಆಗ ಮಾತ್ರ ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು.