ಬೆಂಗಳೂರು: ಕಡೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿ.ಎಂ. ಧನಂಜಯ ಹಾಗೂ ಕೊಳ್ಳೇಗಾಲ ಕ್ಷೇತ್ರದ ಪೊಲೀಸ್ ಇಲಾಖೆಯಿಂದ ಸ್ವಯಂ ನಿವೃತ್ತಿ ಹೊಂದಿರುವ ಸರ್ಕಲ್ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ ಅವರು ಜೆಡಿಎಸ್ ಪಕ್ಷ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಇದೇ ತಿಂಗಳ 11 ಅಥವಾ 14 ರಂದು ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಲಾಗುವುದು. ಹಾಸನ ಜಿಲ್ಲೆಯ ರಾಜಕಾರಣಕ್ಕೆ ನಾನು ಬಂದಿಲ್ಲ. ಅದನ್ನು ರೇವಣ್ಣ ಅವರಿಗೆ ಬಿಟ್ಟಿದ್ದೇನೆ.
ಪಕ್ಷಕ್ಕೆ ದುಡಿದವರನ್ನು ನಾನು ಎಂದೂ ಕೈ ಬಿಟ್ಟಿಲ್ಲ, ತಾಳ್ಮೆ ಅನ್ನೋದು ಇಲ್ಲಿ ಮುಖ್ಯ ಎಂದ ಮಾಜಿ ಮುಖ್ಯಮಂತ್ರಿ, ಬೇಗ ಮತ್ತೊಂದು ಪಟ್ಟಿ ಬಿಡುಗಡೆ ಮಾಡುತ್ತೇವೆ. ಎರಡನೇ ಪಟ್ಟಿ ಇನ್ನೇನು ಅಂತಿಮ ಹಂತದಲ್ಲಿದೆ. ಆ ಪಟ್ಟಿಯಲ್ಲಿ 60ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರುಗಳು ಇರುತ್ತದೆ ಎಂದು ಹೇಳಿದರು. ಧರ್ಮೇಗೌಡರ ಬದಲಾಗಿ ವೈ ಎಸ್ ವಿ ದತ್ತಾ ಅವರಿಗೆ ಪಕ್ಷವು ಕಡೂರು ಟಿಕೆಟ್ ಕೊಟ್ಟಿತು. ಪಕ್ಷಕ್ಕಾಗಿ ದುಡಿದ ನಾಯಕನಿಗೆ ಅನ್ಯಾಯ ಮಾಡಿ, ಕೈ ಕೊಟ್ಟು ಹೋದ ವ್ಯಕ್ತಿಗೆ ಟಿಕೆಟ್ ಕೊಟ್ಟೆವು. ಆದರೆ ಉಪಕಾರ ಸ್ಮರಣೆ ಮರೆತ ಆ ವ್ಯಕ್ತಿ ಕಾಂಗ್ರೆಸ್ ಸೇರಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.