ಬೆಂಗಳೂರು: ಕಾಂಗ್ರೆಸ್ ನಲ್ಲಿ ಸಿಎಂ ಆಯ್ಕೆ ಕಸರತ್ತು ತೀವ್ರಗೊಂಡಿದ್ದು, ಈ ನಿಟ್ಟಿನಲ್ಲಿ ಹೈಕಮಾಂಡ್ ಬುಲಾವಿನ ಹಿನ್ನಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿದರು. ಸಿದ್ದರಾಮಯ್ಯ ನಿವಾಸದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದು, ಸಿದ್ದು ಪರವಾಗಿ ಘೋಷಣೆ ಕೂಗಿದರು.
ಸಿಎಂ ಕಸರತ್ತು ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಆಪ್ತ ಶಾಸಕರು ಅವರ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿದರು. ಶಾಸಕ ಜಮೀರ್ ಅಹ್ಮದ್ ಖಾನ್, ಎಂಬಿ ಪಾಟೀಲ್, ಕೆ.ಎನ್ ರಾಜಣ್ಣ, ಶಿವಲಿಂಗೇಗೌಡ, ಟಿ.ಬಿ ಜಯಚಂದ್ರ ಸೇರಿದಂತೆ ಹಲವು ಶಾಸಕರು ಭೇಟಿ ಮಾಡಿ ಮಾತುಕತೆ ನಡೆಸಿದರು.
50-50 ಸೂತ್ರದಂತೆ ಮೊದಲು ಸಿದ್ದರಾಮಯ್ಯ ಸಿಎಂ ಆಗಲಿ ನಂತರದಲ್ಲಿ ಡಿಕೆ ಶಿವಕುಮಾರ್ ಆಗಲಿ ಎಂದು ಸಿದ್ದರಾಮಯ್ಯ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಸಿದ್ದರಾಮಯ್ಯ ಮನೆಯ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಈ ಬೇಡಿಕೆ ಮುಂದಿಟ್ಟಿದ್ದಾರೆ.
ಟಗರು ಮತ್ತೆ ಬರುತ್ತೆ, ಗುಮ್ಮುತ್ತೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಪರವಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ಬ್ಯಾಟಿಂಗ್ ಮಾಡಿದರು. ಸಿದ್ದರಾಮಯ್ಯ ನಿವಾಸದಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಹೈಕಮಾಂಡ್ ನಿರ್ಧಾರ ಅಂತಿಮವಾಗಿದೆ ಎಂದರು. ಇನ್ನು ಇದೇ ಸಂದರ್ಭದಲ್ಲಿ ನಾನು ಸಚಿವ ಆಕಾಂಕ್ಷಿ ಆಗಿದ್ದೇನೆ ಎಂದೂ ಕಾಶಪ್ಪನವರ್ ತಿಳಿಸಿದರು.
ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದ ಆಪ್ತ ಶಾಸಕರಾದ ಡಾ. ಎಚ್ ಸಿ ಮಹಾದೇವಪ್ಪ, ಕೆ.ಎನ್ ರಾಜಣ್ಣ, ಶಿವಲಿಂಗೇಗೌಡ ಸೇರಿಂದ ಹಲವರು ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎನ್ ರಾಜಣ್ಣ ಸಿಎಲ್ ಪಿ ಸಭೆಯಲ್ಲಿ ನಾನು ಸಿದ್ದರಾಮಯ್ಯ ಪರವಾಗಿ ಮತ ಹಾಕಿದ್ದೇನೆ. ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎಂಬುದು ನನ್ನ ಬೇಡಿಕೆ ಎಂದರು.
ಇನ್ನು ಡಿಕೆ ಶಿವಕುಮಾರ್ ಅವರನ್ನೂ ದೆಹಲಿಗೆ ಕರೆಸಿಕೊಳ್ಳಲು ವರಿಷ್ಠರು ಪ್ರತಿಸುತ್ತಿದ್ದರೂ, ಡಿಕೆ ಶಿವಕುಮಾರ್ ಸಿಎಂ ಆಯ್ಕೆಯ ಭರವಸೆ ನೀಡಿದರೆ ಮಾತ್ರ ದೆಹಲಿಯತ್ತ ಬರುವುದಾಗಿ ಪಟ್ಟು ಹಿಡಿದಿದ್ದಾರೆ.