ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಚೊಂಬು ಹಿಡಿದು ಪ್ರತಿಭಟನೆ ಕೈಗೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ, ಸಚಿವರಾದ ಕೃಷ್ಣ ಬೈರೇಗೌಡ, ಡಾ.ಜಿ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಎಂ.ಸಿ.ಸುಧಾಕರ್, ಚಲುವರಾ ಯಸ್ವಾಮಿ ಸೇರಿದಂತೆ ಕಾಂಗ್ರೆಸ್ ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರದ ವಿರುದ್ಧ ಪ್ಲಕಾರ್ಡ್ಗಳನ್ನು ಹಿಡಿದು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಕೇಳಿದ್ದು 18,171 ಕೋಟಿ ರೂ. ನೀಡಿದ್ದು 3,454 ಕೋಟಿ ರೂ. ಕೂಡಲೇ ಪೂರ್ಣ ಬರ ಪರಿಹಾರವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರಧಾನಿ ಮೋದಿ ವಿರುದ್ಧ ಧಿಕ್ಕಾರ ಕೂಗಿದರು. “ಖಾಲಿ ಚೊಂಬು ಕೊಟ್ಟ ಪಾರ್ಟಿ ಬಿಜೆಪಿ, ಚೊಂಬೇಶ್ವರ ಮೋದಿ”, “ಗೋ ಬ್ಯಾಕ್ ಗೋ ಬ್ಯಾಕ್ ಮೋದಿ ಗೋ ಬ್ಯಾಕ್” ಎಂದು ಧಿಕ್ಕಾರ ಕೂಗಿದರು.