ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ‘ಡೇರ್ ಡೆವಿಲ್ ಮುಸ್ತಾಫಾ’ ಕೃತಿ ಆಧರಿತ ಶಶಾಂಕ್ ನಿರ್ದೇಶನದ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ಚಿತ್ರತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಹಿಂದೆ ಮನವಿ ಸಲ್ಲಿಸಿತ್ತು. ಚಿತ್ರತಂಡದ ಮನವಿಯನ್ನು ಪುರಸ್ಕರಿಸಿರುವ ಸಿದ್ದು ಇದೀಗ ಚಿತ್ರಕ್ಕೆ ರಿಯಾಯಿತಿ ನೀಡಿದ್ದಾರೆ.
ಡೇರ್ ಡೆವಿಲ್ ಮುಸ್ತಾಫಾ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿದರೆ, ಸಿನಿಮಾ ಮತ್ತಷ್ಟು ಜನರಿಗೆ ತಲುಪಲು ಸಾಧ್ಯವಾಗಬಹುದು ಹಾಗೂ ಕಡಿಮೆ ದರದಲ್ಲಿ ಚಿತ್ರ ತೋರಿಸಲು ಉತ್ಸಾಹ ಬರಬಹುದು ಎಂದು ಚಿತ್ರತಂಡ ಸಿದ್ದರಾಮಯ್ಯ ಬಳಿ ಮನವಿ ಮಾಡಿಕೊಂಡಿತ್ತು. ಚಿತ್ರದ ಚಿತ್ರಕಥಾ ಲೇಖಕ ಅನಂತ್, ನಿರ್ದೇಶಕ ಶಶಾಂಕ್ ಹಾಗೂ ಚಿಂತಕ ಪ್ರೊ.ನಟರಾಜ್ ಹುಳಿಯಾರ್ ಸೇರಿದಂತೆ ಹಲವರು ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
‘ತೇಜಸ್ವಿಯವರ ಓದುಗರು, ಅಭಿಮಾನಿಗಳು, ತೇಜಸ್ವಿಯವರ ಕುಟುಂಬ ವರ್ಗ ಈ ಸಿನಿಮಾವನ್ನು ನೋಡಿ ಪ್ರಶಂಸಿಸುತ್ತಿದ್ದಾರೆ. ಕರ್ನಾಟಕ ರಾಜ್ಯವು ಸರ್ವಜನಾಂಗದ ಶಾಂತಿಯ ತೋಟವಾಗಲು ಇಂತಹ ಸಿನಿಮಾಗಳು ಜನರಿಗೆ ಹೆಚ್ಚುಹೆಚ್ಚು ತಲುಪಬೇಕು ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ತಾವು ಸಾಧ್ಯವಾದಲ್ಲಿ ಬಿಡುವು ಮಾಡಿಕೊಂಡು ಈ ಸಿನಿಮಾ ನೋಡಬೇಕೆಂದು ವಿನಂತಿಸಿಕೊಳ್ಳುತೇವೆ. ಇನ್ನಷ್ಟು ಜನರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಸಿನಿಮಾ ನೋಡಲು ಅನುಕೂಲವಾಗುವಂತೆ ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಮನವಿ ಮಾಡುತ್ತೇವೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.