ರಾಮನಗರ, (ಮಾಗಡಿ)- ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸೆ.13ರ ಶುಕ್ರವಾರ ಮಾಗಡಿಯ ಹೊಸಪೇಟೆ ಸರ್ಕಲ್ ನಲ್ಲಿ ಮಾಗಡಿ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, ನಿರ್ಮಾಣ ಕಾರ್ಯ ಪೂರ್ಣಗೊಂಡ ವಿವಿಧ ಕಟ್ಟಡಗಳನ್ನು ಲೋಕಾರ್ಪಣೆ ಮಾಡಿದರು.
ಕಾಮಗಾರಿಗಳು ಹಾಗೂ ಉದ್ಘಾಟನೆಯಾದ ಕಟ್ಟಡಗಳ ವಿವರ ಇಂತಿದೆ.
8 ಕೋಟಿ ರೂಪಾಯಿ ವೆಚ್ಚದ ಮಾಗಡಿ ಪುರಸಭೆ ಮಾರುಕಟ್ಟೆ (ಅಂಗಡಿ) ಮಳಿಗೆಗಳ ನಿರ್ಮಾಣ, ಲೋಕೋಪಯೋಗಿ ಇಲಾಖೆ ವತಿಯಿಂದ ಮಾಗಡಿ ಪಟ್ಟಣದ ವ್ಯಾಪ್ತಿಯಲ್ಲಿ ಎಸ್.ಎಚ್.ಡಿ.ಪಿ. (ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ) ಯ 20 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ, ಮಾಗಡಿಯ ಜೂನಿಯರ್ ಕಾಲೇಜ್ ಆವರಣದಲ್ಲಿ 7 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಆಡಿಟೋರಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಬೆಂಗಳೂರು ಹಾಲು ಒಕ್ಕೂಟದ ನೂತನ ಶಿಬಿರ ಕಚೇರಿ ಹಾಗೂ ಮಾಗಡಿ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಐಟಿಐ ಕಾಲೇಜನ್ನು ಉದ್ಘಾಟಿಸಿದರು.
ಮಾಗಡಿ ತಾಲೂಕಿನ ಹಾರೋಹಳ್ಳಿ ಗ್ರಾಮದ ಪಾಲಿಟೆಕ್ನಿಕ್ ಕಾಲೇಜಿಗೆ, ಮಾಗಡಿ ಪಟ್ಟಣದಲ್ಲಿ ಅತ್ಯಾಧುನಿಕ ಗ್ರಂಥಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಮಾಗಡಿ ತಾಲೂಕು ಜೂನಿಯರ್ ಕಾಲೇಜಿನ ಕ್ರೀಡಾಂಗಣದ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದ ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ ವೈ.ಜಿ.ಗುಡ್ಡ ಮುಳುಗಡೆ ಪ್ರದೇಶದ ನಿರಾಶ್ರಿತರಿಗೆ ಹಕ್ಕು ಪತ್ರಗಳ ವಿತರಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ಸಚಿವರು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾ ರೆಡ್ಡಿ, ಸಚಿವರಾದವ ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ವಸತಿ ಸಚಿವರಾದ ಜಮೀರ್ ಅಹಮದ್,
ಶಾಸಕರಾದ ಎಚ್.ಸಿ. ಬಾಲಕೃಷ್ಣ, ಇಕ್ಬಾಲ್ ಹುಸೇನ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಎಚ್.ಎಂ. ರೇವಣ್ಣ, ವಿಧಾನ ಪರಿಷತ್ ಶಾಸಕರಾದ ರಾಮೋಜಿಗೌಡ, ಸುಧಾಮ್ ದಾಸ್, ಇತರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿದ್ದರು.