ಪ್ರತಿಪಕ್ಷ ನಾಯಕ ಆರ್ ಅಶೋಕ್ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ನೀವು ಮತ್ತೆ ಮತ್ತೆ ಸುಳ್ಳುಗಳನ್ನು ಹೇಳಿ ನಮ್ಮ ಕೈಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುತ್ತಲೇ ಇದ್ದೀರಿ. ಇದು ಮುಂದುವರಿಯಲಿ ಆಲ್ ದಿ ಬೆಸ್ಟ್ ಎಂದು ವ್ಯಂಗ್ಯವಾಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಹೀಗೆಂದಿದ್ದೇಕೆ?
ಏನು ಹೇಳಿದ್ದರು ಅಶೋಕ್? ಪೂರ್ಣ ವಿವರ ಇಲ್ಲಿದೆ. ನಮ್ಮ ಕೈಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುತ್ತಲೇ ಇದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರನ್ನುದ್ದೇಶಿಸಿ ವ್ಯಂಗ್ಯವಾಡಿದ್ದಾರೆ. ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ಗಳಿಗೆ ಕೇರಳದ ಮಲಯಾಳಿ ಹುಡುಗರನ್ನು ಚಾಲಕರನ್ನಾಗಿ ನೇಮಿಸುತ್ತಿರುವ ಬಗ್ಗೆ ಮತ್ತು ಇಲ್ಲಿನ ಚಾಲಕರಿಗೆ ಸರಿಯಾದ ವೇತನ ನೀಡದಿರುವ ಅವ್ಯವಸ್ಥೆ ಬಗ್ಗೆ ‘ಟಿವಿ9’ ಗುರುವಾರ ವಿಸ್ತೃತ ವರದಿ ಪ್ರಕಟಿಸಿತ್ತು. ಇದನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಉಲ್ಲೇಖಿಸಿದ್ದ ಆರ್ ಅಶೋಕ್, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೀಗ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಅಶೋಕ್ ಎಕ್ಸ್ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಸ್ವಾಮಿ ವಿರೋಧ ಪಕ್ಷದ ನಾಯಕರೇ, ನಿಮ್ಮ ಟ್ವೀಟ್ ನಿಮ್ಮ ಪರಮ ಅಜ್ಞಾನದ ಫಲವೋ? ಅಥವಾ ವಿರೋಧ ಪಕ್ಷದ ನಾಯಕ ಅಸ್ವಿತ್ವದಲ್ಲಿದ್ದಾರೆ ಎಂದು ಜನರಿಗೆ ತಿಳಿಸಲು ಟ್ವೀಟ್ ಮಾಡುತ್ತಿರೋ? ಇದು ನಮ್ಮನ್ನೂ ಸೇರಿಸಿಕೊಂಡಂತೆ ರಾಜ್ಯದ ಜನಸಾಮಾನ್ಯರಿಗೂ ಅರ್ಥವಾಗದೆ ಇರುವ ಯಕ್ಷ ಪ್ರಶ್ನೆ. ನೀವು ಸುಳ್ಳಿನ ಕೋಟೆಯನ್ನು ಎಷ್ಟೇ ದೊಡ್ಡದಾಗಿ ಕಟ್ಟಿದರೂ ಅದರ ಆಯುಷ್ಯ ಕಡಿಮೆ. ನಮ್ಮ ಸತ್ಯದ ಒಂದು ಏಟಿಗೆ ಅದು ಕುಸಿದುಬೀಳುತ್ತಲೇ ಇದೆ. ನೀವು ಮತ್ತೆ ಮತ್ತೆ ಸುಳ್ಳುಗಳನ್ನು ಹೇಳಿ ನಮ್ಮ ಕೈಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುತ್ತಲೇ ಇದ್ದೀರಿ. ಇದು ಮುಂದುವರಿಯಲಿ ಆಲ್ ದಿ ಬೆಸ್ಟ್’ ಎಂದು ಉಲ್ಲೇಖಿಸಿದ್ದಾರೆ.