ಬೆಂಗಳೂರು ;– ಸಿಎಂ ಸಿದ್ದರಾಮಯ್ಯ ಅವರು ಜನವಿರೋಧಿ ಬಜೆಟ್ ಮಂಡಿಸಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಜನ ವಿರೋಧಿ ಬಜೆಟ್ ಆಗಿದ್ದು, ಜನರಿಗೆ ಭಾರ ಹೊರಿಸಿರುವ, ಅಭಿವೃದ್ಧಿ ವಿರೋಧಿ, ಅಭಿವೃದ್ಧಿಗೆ ಮಾರಕವಾಗುವ, ಯಾವುದೆ ಹೊಸ ಭರವಸೆ ಮೂಡಿಸದ, ಜನತೆಗೆ ನಿರಾಶಾದಾಯಕ ಬಜೆಟ್ ಆಗಿದೆ. ರಾಜ್ಯವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವ ರಿವರ್ಸ್ ಗೇರ್ ಬಜೆಟ್ ಎಂದು ಟೀಕಿಸಿದರು.
ನಾವು ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ಗೆ ನಾಲ್ಕು ತಿಂಗಳ ಲೇಖಾನುದಾನ ಪಡೆದಿದ್ದೆವು. ಈಗ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದಾರೆ. ಇದು ರಾಜಕೀಯ ಪ್ರೇರಿತ ಬಜೆಟ್ ಆಗಿದೆ. ಹಲವಾರು ಅಂಕಿ – ಅಂಶಗಳನ್ನು ಆಧರಿಸಿ ವಾಸ್ತವಾಂಶಕ್ಕೆ ಎಲ್ಲ ಸರ್ಕಾರಗಳು ಬಜೆಟ್ ಮಾಡಲಿವೆ. ಆದರೆ, ಇವರು ಎಲ್ಲವನ್ನೂ 2013ಕ್ಕೆ ಹೋಲಿಕೆ ಮಾಡಿದ್ದಾರೆ. ಇದು ರಿವರ್ಸ್ ಗೇರ್ ಇರುವ ಸರ್ಕಾರ, ನಾವು ಹಿಂದೆ ಹೋಗಬೇಕಾ ಮುಂದೆ ಹೋಗಬೇಕಾ? ಎಂದು ಪ್ರಶ್ನಿಸಿದರು.