ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಎದುರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಬಳಿಕ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಲ್ಮಾನ್ ಖಾನ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಮುಂಬೈನ ಬಾಂದ್ರಾ ನಿವಾಸದಲ್ಲಿ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿದ ಶಿಂಧೆ ಗುಂಡಿನ ದಾಳಿಯ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ವೇಳೆ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಜೊತೆ ಏಕನಾಥ್ ಶಿಂಧೆ ಅವರು ಮಾತುಕಥೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಲ್ಮಾನ್ ಖಾನ್ ವಿರೋಧಿಗಳಿಗೆ ಖಡಕ್ ಎಚ್ಚರಿಗೆ ನೀಡಿದ್ದಾರೆ.
‘ನಾನು ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿದ್ದೇವೆ. ಅವರ ಜೊತೆ ನಮ್ಮ ಸರ್ಕಾರ ಇದೆ ಎಂದು ಭರವಸೆ ನೀಡಿದ್ದೇನೆ. ಈ ಘಟನೆಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಿದ್ದೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇದು ಮಹಾರಾಷ್ಟ್ರ. ಇಲ್ಲಿ ಯಾವುದೇ ಗ್ಯಾಂಗ್ ಉಳಿದುಕೊಂಡಿಲ್ಲ. ಎಲ್ಲ ಗ್ಯಾಂಗ್ ಮತ್ತು ಗೂಂಡಾಗಳನ್ನು ಕಿತ್ತು ಹಾಕುತ್ತೇವೆ. ಇಲ್ಲಿ ಯಾವುದೇ ರೌಡಿಸಂ ಮುಂದುವರಿಯಲು ಬಿಡುವುದಿಲ್ಲ’ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
‘ಮುಂಬೈನಲ್ಲಿ ಭೂಗತ ಲೋಕ ಅಂತ್ಯವಾಗಿದೆ. ಈ ಬಿಷ್ಣೋಯ್ ಎಂಬಾತನನ್ನು ನಾವು ಮುಗಿಸುತ್ತೇವೆ. ಮತ್ತೆ ಯಾರೂ ಈ ರೀತಿ ಕೃತ್ಯ ಎಸಗಲು ಧೈರ್ಯ ತೋರಿಸಬಾರದು. ಆ ರೀತಿಯಲ್ಲಿ ಪೊಲೀಸರು ಕೆಲಸ ಮಾಡುತ್ತಾರೆ. ಇಲ್ಲಿ ಯಾರದ್ದೂ ದಾದಾಗಿರಿ ನಡೆಯಲ್ಲ. ಸಲ್ಮಾನ್ ಖಾನ್ ಅವರು ದೊಡ್ಡ ಸೆಲೆಬ್ರಿಟಿ. ಸಾಮಾನ್ಯ ನಾಗರಿಕರಿಗೂ ಯಾರಾದರೂ ತೊಂದರೆ ಕೊಟ್ಟರೆ ಸರ್ಕಾರ ಸುಮ್ಮಿರುವುದಿಲ್ಲ.
ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ವಿರೋಧ ಪಕ್ಷದವರು ಆರೋಪಿಸಿದ್ದಾರೆ. ಅದಕ್ಕೆ ಉತ್ತರಿಸಿದ ಏಕನಾಥ್ ಶಿಂಧೆ, ‘ಈ ಹಿಂದಿನ ಸರ್ಕಾರಗಳು ಏನೆಲ್ಲ ಮಾಡಿವೆ ಎಂಬುದರ ಬಗ್ಗೆ ನಾನು ಮಾತನಾಡಲ್ಲ. ಈಗ ಆಗಿರುವ ಗುಂಡಿನ ದಾಳಿಯ ಘಟನೆಯನ್ನೂ ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಮುಂಬೈ ಜನರ ಮೇಲೆ ಕೈ ಎತ್ತವ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ಏಕನಾಥ್ ಶಿಂಧೆ ಪ್ರತಿಕ್ರಿಯಿಸಿದ್ದಾರೆ.