ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ (Yogi Adityanath)ಇಂದು ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳ ಜೊತೆ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ‘ನಾನು ನನ್ನ ಸಚಿವ ಸಹೋದ್ಯೋಗಿಗಳ ಜೊತೆ ಸಿನಿಮಾ ನೋಡಿದೆ. ದಿ ಕೇರಳ ಸ್ಟೋರಿ ಚಿತ್ರ ತಂಡಕ್ಕೆ ಅಭಿನಂದನೆಗಳು’ ಎಂದು ಪೋಸ್ಟ್ ಮಾಡಿದ್ದಾರೆ.
ಮೊನ್ನೆಯಷ್ಟೇ ಸಿನಿಮಾ ದಿ ಕೇರಳ ಸ್ಟೋರಿ ಸಿನಿಮಾ ಟೀಮ್ ಯೋಗಿ ಆದಿತ್ಯ ನಾಥ್ ಅವರನ್ನು ಭೇಟಿ ಮಾಡಿ ಧನ್ಯವಾದಗಳನ್ನು ತಿಳಿಸಿತ್ತು. ಉತ್ತರ ಪ್ರದೇಶದಲ್ಲಿ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಿದ್ದರಿಂದ ಇಡೀ ಟೀಮ್ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿತ್ತು. ಇದೇ ಸಂದರ್ಭದಲ್ಲಿ ಚಿತ್ರತಂಡಕ್ಕೆ ಗಿಫ್ಟ್ ನೀಡಿ ಅಭಿನಂದಿಸಿದ್ದ ಸಿಎಂ, ಸಿನಿಮಾ ವೀಕ್ಷಿಸುವುದಾಗಿ ತಿಳಿಸಿದ್ದರು. ಮಾತುಕೊಟ್ಟಂತೆ ಇಂದು ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ಅದಾ ಶರ್ಮಾ ನಟನೆಯ ‘ದಿ ಕೇರಳ ಸ್ಟೋರಿ’ ಬಾಕ್ಸ್ ಆಫೀಸಿನಲ್ಲಿ ದಾಖಲೆ ಕಲೆಕ್ಷನ್ ಕಲೆ ಹಾಕುತ್ತಿದೆ. ರಿಲೀಸ್ ಆದ 7 ದಿನಕ್ಕೆ ಬರೋಬ್ಬರಿ 80 ಕೋಟಿ ರೂಪಾಯಿ ಬಾಚುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸುತ್ತಿದೆ. ಈ ಪ್ರಮಾಣದಲ್ಲಿ ದಿ ಕೇರಳ ಸ್ಟೋರಿ ಗೆಲ್ಲುತ್ತಿದ್ದಂತೆಯೇ ಅದಾ ಶರ್ಮಾಗೆ ಭರ್ಜರಿ ಆಫರ್ಸ್ ಬರುತ್ತಿವೆ. ಅಲ್ಲದೇ, ಅನೇಕ ಸಂಘಟನೆಗಳು ಸಿನಿಮಾವನ್ನು ಉಚಿತವಾಗಿ ತೋರಿಸುವ ಮೂಲಕ ಬಾಕ್ಸ್ ಆಫೀಸಿಗೆ ಆದಾಯ ಹರಿದು ಬರುವಂತೆ ಮಾಡುತ್ತಿದ್ದಾರೆ.
ಎರಡು ರಾಜ್ಯಗಳಲ್ಲಿ ನಿಷೇಧ ಹೇರಿದ್ದರೂ, ಸ್ವತಃ ಕೇರಳದಲ್ಲೇ ಸಿನಿಮಾ ಪ್ರದರ್ಶನಕ್ಕೆ ನಾನಾ ಅಡತಡೆಗಳನ್ನು ಒಡ್ಡಿದ್ದರೂ ಅದು ಹೇಗೆ ಐದೇ ದಿನಕ್ಕೆ ಐವತ್ತು ಕೋಟಿ ಕಲೆಕ್ಷನ್ ಆಗೋಕೆ ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ. ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲೂ ಚರ್ಚೆ ಮಾಡಿದ್ದಾರೆ. ಆದರೆ, ಬಾಲಿವುಡ್ ಸಿನಿ ಪಂಡಿತರ ಲೆಕ್ಕಾಚಾರವೇ ಬೇರೆ ಇದೆ. ಮೂರು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಘೋಷಣೆ ಮಾಡಿರುವುದರಿಂದ ಐವತ್ತು ಕೋಟಿ ರೂಪಾಯಿ ಗಳಿಸಲು ಸಾಧ್ಯ ಎಂದು ಹೇಳಲಾಗುತ್ತಿದೆ.
ಸಿನಿಮಾ ಮೊದಲ ದಿನ ಸಾಧಾರಣ ಓಪನಿಂಗ್ ಪಡೆದುಕೊಂಡಿದ್ದರೂ, ಮುಂದಿನ ದಿನಗಳಲ್ಲಿ ಅಚ್ಚರಿ ಎನ್ನುವಂತೆ ದುಡ್ಡು ಬಾಕ್ಸ್ ಆಫೀಸಿಗೆ ಹರಿದು ಬಂದಿದೆ. ಶುಕ್ರವಾರ 8.03 ಕೋಟಿ ರೂ. ಶನಿವಾರ 11.22 ಕೋಟಿ ರೂ. ಭಾನುವಾರ 16 ಕೋಟಿ ರೂ. ಸೋಮವಾರ 10.07 ಕೋಟಿ ರೂ. ಮಂಗಳವಾರ 11.14 ಕೋಟಿ ರೂ. ಬುಧವಾರ 12 ಕೋಟಿ ರೂ. ಶುಕ್ರವಾರ ಕೂಡ ಅಂದಾಜು 12 ಕೋಟಿ ರೂಪಾಯಿ ಸೇರಿ ಭಾರತದಲ್ಲೇ ಏಳು ದಿನಕ್ಕೆ 80.86 ಕೋಟಿ ಗಳಿಕೆ ಮಾಡಿದೆ.