ನವದೆಹಲಿ: ಆಂಧ್ರಪ್ರದೇಶದ (Andhra Pradesh) ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿ ತಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ವಿಶೇಷ ರಾಜ್ಯ ಸ್ಥಾನಮಾನ, ಕೇಂದ್ರದಿಂದ ಬಾಕಿ ಇರುವ ಹಣ ಮತ್ತು ನೆರೆಯ ತೆಲಂಗಾಣದೊಂದಿಗೆ ಬಾಕಿ ಪಾವತಿಸಲು ಅವರ ಮಧ್ಯಸ್ಥಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದಾರೆ. ರಾಜ್ಯ ವಿಭಜನೆಯಾಗಿ ಒಂಬತ್ತು ವರ್ಷಗಳಾದರೂ ಬಾಕಿ ಉಳಿದಿರುವ ಹಲವಾರು ಸಮಸ್ಯೆಗಳ ಕುರಿತು ತ್ವರಿತಗತಿಯಲ್ಲಿ ಕೆಲಸ ಮಾಡುವಂತೆ ಜಗನ್ ಪ್ರಧಾನಿಗೆ ಮನವಿ ಮಾಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿ ಮಾಡಿದ್ದಾರೆ.
ಪ್ರಧಾನಿಗೆ ಸಲ್ಲಿಸಿದ ಜ್ಞಾಪಕ ಪತ್ರದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ಬಾಕಿ ಉಳಿದಿರುವ ಹಲವಾರು ದ್ವಿಪಕ್ಷೀಯ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ರೆಡ್ಡಿ ಮನವಿ ಮಾಡಿದ್ದಾರೆ. ಆಂಧ್ರಪ್ರದೇಶ ಪುನರ್ವಿಭಜನಾ ಕಾಯ್ದೆಯಲ್ಲಿ ಉಲ್ಲೇಖಿಸಲಾದ ವಿಷಯಗಳ ಕುರಿತು ರಚಿಸಲಾದ ಕೇಂದ್ರ ಹಣಕಾಸು ಕಾರ್ಯದರ್ಶಿ ನೇತೃತ್ವದ ಸಮಿತಿಯು ಈಗಾಗಲೇ ಹಲವಾರು ಸುತ್ತಿನ ಚರ್ಚೆಗಳನ್ನು ಮಾಡಿದೆ, ಆದರೆ ಕೆಲವು ಸಮಸ್ಯೆಗಳು ಬಗೆಹರಿಯದೆ ಉಳಿದಿವೆ ಎಂದು ಅವರು ಹೇಳಿದ್ದಾರೆ.2014-15ನೇ ಹಣಕಾಸು ವರ್ಷದ ಸಂಪನ್ಮೂಲ ಅಂತರ ನಿಧಿಯಡಿ ₹ 36,625 ಕೋಟಿ ಬಾಕಿ ಉಳಿದಿದ್ದು, ಕೂಡಲೇ ಬಿಡುಗಡೆ ಮಾಡಬೇಕು. 2021-22ರಲ್ಲಿ ನೀಡಿದ್ದ ₹ 42,472 ಕೋಟಿ ಸಾಲದ ಮಿತಿಯನ್ನು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ₹ 17,923 ಕೋಟಿ ಮಾಡಲಾಗಿತ್ತು. ಅದನ್ನು ಹೆಚ್ಚಿಸುವಂತೆ ಜಗನ್ ಮನವಿ ಮಾಡಿದ್ದಾರೆ.