ಜೋಹಾನ್ಸ್ಬರ್ಗ್: ಅರ್ಷ್ದೀಪ್ ಸಿಂಗ್ ಮತ್ತು ಅವೇಶ್ ಖಾನ್ ಅವರ ಘಾತಕ ಬೌಲಿಂಗ್ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲಿಗೆ ತುತ್ತಾಗಿದೆ. ಯುವ ಆರಂಭಿಕ ಸಾಯಿ ಸುದರ್ಶನ್ ಹಾಗೂ ಶ್ರೇಯಸ್ ಅಯ್ಯರ್ ಅರ್ಧಶತಕಗಳ ಬ್ಯಾಟಿಂಗ್ ನೆರವಿನಿಂದ ಭಾರತ (Team India) 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-0 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಜೋಹಾನ್ಸ್ಬರ್ಗ್ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಸೂಪರ್ ಸಂಡೇ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ (South Africa) ತಂಡ 27.3 ಓವರ್ಗಳಲ್ಲಿ 116 ರನ್ಗಳಿಗೆ ಆಲೌಟ್ ಆಯಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಭಾರತ 16.4 ಓವರ್ಗಳಲ್ಲೇ 2 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿ ಜಯ ಸಾಧಿಸಿತು.
ಭಾರತದ ಪರ ತಾಳ್ಮೆಯ ಆಟವಾಡಿದ ಯುವ ಆರಂಭಿಕ ಸಾಯಿ ಸುದರ್ಶನ್ ಹಾಗೂ ಶ್ರೇಯಸ್ ಅಯ್ಯರ್ ಅರ್ಧಶತಕಗಳ ಕೊಡುಗೆ ನೀಡಿದರು. ಶ್ರೇಯಸ್ ಅಯ್ಯರ್ 45 ಎಸೆತಗಳಲ್ಲಿ 52 ರನ್ (6 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾದರೆ, ಸಾಯಿ ಸುದರ್ಶನ್ 43 ಎಸೆತಗಳಲ್ಲಿ 55 ರನ್ (9 ಬೌಂಡರಿ, 43 ಎಸೆತ) ಬಾರಿಸಿ ಅಜೇಯರಾಗುಳಿದರು. ಇದರಿಂದ ಭಾರತ 16.4 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 117 ರನ್ ಬಾರಿಸಿ ಗೆಲುವು ದಾಖಲಿಸಿತು. ಸರಣಿಯ ದ್ವಿತೀಯ ಪಂದ್ಯ ಡಿಸೆಂಬರ್ 19 ಮಂಗಳವಾರ ನಡೆಯಲಿದೆ.