ಬೆಂಗಳೂರು ;- ಹೆಚ್ಡಿಕೆ ಬಿಡುಗಡೆ ಮಾಡಿದ ರೇಟ್ ಕಾರ್ಡ್ ಅವರ ಅಧಿಕಾರಾವಧಿಯಲ್ಲಿ ಆಗಿತ್ತೇನೋ ಎಂದು ಹೇಳುವ ಮೂಲಕ ಸಚಿವ ಚೆಲುವರಾಯಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಅಧಿಕಾರ ಕಳೆದುಕೊಂಡು ಇರಲು ಆಗಲ್ಲ. ಅವರು ಹಿಂದಿನ ಸರ್ಕಾರದ ಅವಧಿಯ ಪಟ್ಟಿ ತಂದು ಬಿಡುಗಡೆ ಮಾಡಿರಬೇಕು. ಅವರ ಟಾರ್ಗೆಟ್ ಈ ಸರ್ಕಾರವೋ ಅಥವಾ, ಚೆಲುವರಾಯಸ್ವಾಮಿಯೋ ಅವರೇ ಹೇಳಬೇಕು. ಅವರು ಮಾಜಿ ಸಿಎಂ ಇದ್ದಾರೆ. ಈ ಬಗ್ಗೆ ಅವರೇ ಮಾತಾಡಲಿ. ನಾವೇನಾದರೂ ಅವರ ಬಗ್ಗೆ ಮಾತಾಡಿದ್ರೆ, ಅವರ ಫ್ಯಾಮಿಲಿಯನ್ನು ಟಾರ್ಗೆಟ್ ಮಾಡುತ್ತಿದ್ದೇವೆ ಎಂದು ಹೇಳ್ತಾರೆ ಎಂದು ಟೀಕಿಸಿದರು.
ಎಲ್ಲೂ ಹೆಚ್ ಡಿ ದೇವೇಗೌಡ ಹಾಗೂ ಅವರ ಕುಟುಂಬದ ಬಗ್ಗೆ ನಾವು ಚರ್ಚೆ ಎತ್ತಿಲ್ಲ. ಇವರ ಬಗ್ಗೆ ಮಾತಾಡಿದ್ರೆ ಕುಟುಂಬದ ಬಗ್ಗೆ ಮಾತಾಡಿದ್ರು ಅಂತಾರೆ. ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಒಂದು ವ್ಯಕ್ತಿತ್ವ ಇದೆ. ಅವರು ಅದನ್ನು ಬಳಸಿದ್ರೆ ಸಾಕು. ತಾವೊಬ್ಬ ಈ ರಾಜ್ಯದ ಮಾಜಿ ಸಿಎಂ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಅಥವಾ ಅದನ್ನು ಬಳಸಿಕೊಂಡು ಮಾತಾಡಿದ್ರೆ ಸಾಕು. ಅಸೆಂಬ್ಲಿಯಲ್ಲಿ ಕೂಡ ಅವರು ಮಾತಾಡಿದ್ದಾರೆ. ಅಸೆಂಬ್ಲಿಯಲ್ಲಿ ನನ್ನ ಬಗ್ಗೆಯೂ ಮಾತಾಡಿದ್ದಾರೆ. ಅವರು ಈ ರೀತಿ ಬಹಿರಂಗವಾಗಿ ಮಾತನಾಡುವ ಬದಲು ಬರೆದು ದೂರು ಕೊಡಲಿ. ಅನುಭವಸ್ಥರಿದ್ದಾರೆ ಅವರು, ಎಲ್ಲಾ ಅನುಭವ ನಮಗಿಂತ ಜಾಸ್ತಿ ಅವರಿಗೆ ಇದೆ. ಅವರು ಸಿಎಂ ಇದ್ದಾಗಲೇ 150 ಕೋಟಿ ರೂಪಾಯಿ ಹಗರಣ ನಡೆದಿತ್ತು ಎಂದು ಆರೋಪಿಸಿದರು.