ಬೆಂಗಳೂರು : ಇತ್ತಿಚೆಗೆ ಬೆಂಗಳೂರಿನ ಶಿವಾಜಿನಗರ ಮಸೀದಿಯಲ್ಲಿ(Shivajinagar Masjid) ಬಾಂಬ್ ಇಟ್ಟು ಸ್ಫೋಟಿಸುವ ಸಂಚಿನ ಬೆದರಿಕೆ ಕರೆ ಮಾಡಿ ಆತಂಕ ಸೃಷ್ಟಿಸಿದ್ದ ಸೈಯದ್ ಖಾಜಿ ಮಹಮದ್ ಅನ್ವರ್ ಉಲ್ಲಾ(37) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಉಸ್ಮಾನಾಬಾದ್(Osmanabad, Maharashtra) ನಿವಾಸಿಯಾದ ಸೈಯದ್ ಖಾಜಿ ಅವಿವಾಹಿತನಾಗಿದ್ದು, ದೇಶದ ಹಲವು ನಗರಗಳಲ್ಲಿ ಸುತ್ತಾಟ ನಡೆಸಿ ಭಿಕ್ಷಾಟನೆ ಮಾಡುತ್ತಿದ್ದ. ಮಸೀದಿಗಳ ಬಳಿ ಆಶ್ರಯ ಪಡೆದು ಅಲ್ಲಿಯೇ ಮಲಗುತ್ತಿದ್ದ. ಜು.4ರಂದು ನಗರಕ್ಕೆ ಆಗಮಿಸಿ ಶಿವಾಜಿನಗರ ಮಸೀದಿ ಬಳಿ ತೆರಳಿದ್ದ. ರಾತ್ರಿ ವೇಳೆ ಅಲ್ಲಿಯೇ ಉಳಿದುಕೊಳ್ಳಲು ಕೇಳಿದ್ದ. ಮಸೀದಿಯಲ್ಲಿ ರಾತ್ರಿ ವೇಳೆ ಭದ್ರತಾ ಸಿಬ್ಬಂದಿ ಹೊರತುಪಡಿಸಿ, ಇತರರಿಗೆ ಅವಕಾಶವಿಲ್ಲ ಎಂದು ಹೇಳಿ ಆತನನ್ನು ಅಲ್ಲಿಂದ ಕಳುಹಿಸಲಾಗಿತ್ತು.
ಮಸೀದಿ ಶೋಧನೆ ಬಳಿಕ ಹುಸಿ ಬಾಂಬ್ ಬೆದರಿಕೆ ಕರೆ ಎಂಬುದು ಖಚಿತಪಟ್ಟಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕರೆ ಬಂದಿದ್ದ ಮೊಬೈಲ್ನ ನಂಬರ್ ಜಾಡು ಹಿಡಿದು ತನಿಖೆ ಚುರುಕುಗೊಳಿಸಿದರು. ಆಗ ವ್ಯಕ್ತಿಯೊಬ್ಬ ಮಸೀದಿ ಬಳಿ ಬಂದಿದ್ದ ಮಾಹಿತಿ ಸಿಕ್ಕಿತ್ತು. ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಹೊರಟಾಗ ಆರೋಪಿಯು ಕರ್ನೂಲ್ನ ಬಸ್ವೊಂದರಲ್ಲಿಸಂಚರಿಸುತ್ತಿರುವುದು ಗೊತ್ತಾಗಿದೆ. ತಕ್ಷಣ ವಿಶೇಷ ತಂಡವೊಂದು ಕರ್ನೂಲ್ಗೆ ತೆರಳಿತ್ತು. ಆದರೆ, ಅಷ್ಟರಲ್ಲಾಗಲೇ ಆರೋಪಿ ಸೈಯದ್ ಖಾಜಿ, ಮೆಹಬೂಬ್ ನಗರ ತಲುಪಿದ್ದ. ಅಂತಿಮವಾಗಿ ಆರೋಪಿಯನ್ನು ಬೆನ್ನಟ್ಟಿ ಬಂಧಿಸಿ ಕರೆತರಲಾಗಿದೆ.