ಜೂನ್ 7 ರಿಂದ 11 ರವರೆಗೆ ಇಂಗ್ಲೆಂಡ್ನ ದಿ ಓವಲ್ ಅಂಗಣದಲ್ಲಿ ನಡೆಯಲಿರುವ ಐಸಿಸಿ ಆಯೋಜನೆಯ 2 ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಪಾಯಕಾರಿ ಆಗಲಿದ್ದಾರೆ ಎಂದು ಯುವ ಆಲ್ ರೌಂಡರ್ ಕ್ಯಾಮೆರಾನ್ ಗ್ರೀನ್ ಎಚ್ಚರಿಕೆ ನೀಡಿದ್ದಾರೆ.
2021ರಲ್ಲಿ ನಡೆದ ಚೊಚ್ಚಲ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ ನಿಂದ ಸೋತ ಟೀಮ್ ಇಂಡಿಯಾ, ಇದೀಗ ಪ್ಯಾಟ್ ಕಮ್ಮಿನ್ಸ್ ಸಾರಥ್ಯದ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 2ನೇ ಆವೃತ್ತಿಯ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಫೈನಲ್ ಪಂದ್ಯ ಗೆಲ್ಲಬೇಕಾದರೆ ವಿರಾಟ್ ಕೊಹ್ಲಿ ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತದೆ. ಅಂದಹಾಗೆ ವಿರಾಟ್ ಕೊಹ್ಲಿ ಇತ್ತೀಚೆಗೆ ಎಲ್ಲ ಮಾದರಿ ಕ್ರಿಕೆಟ್ನಲ್ಲಿ ತಮ್ಮ ಶ್ರೇಷ್ಠ ಲಯಕ್ಕೆ ಮರಳಿದ್ದಾರೆ.
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ರೆಡ್ ಬಾಲ್ ಕ್ರಿಕೆಟ್ನಲ್ಲಿ ಅಪ್ರತಿಮ ದಾಖಲೆ ಹೊಂದಿದ್ದು, ಈವರೆಗೆ ಆಡಿದ 24 ಟೆಸ್ಟ್ ಪಂದ್ಯಗಳಿಂದ 48.26ರ ಸರಾಸರಿಯಲ್ಲಿ 1979 ರನ್ ಬಾರಿಸಿದ್ದು, ಇದರಲ್ಲಿ ಬರೋಬ್ಬರಿ 8 ಶತಕಗಳಿವೆ. ಅಲ್ಲದೆ ಇದೇ ವರ್ಷದ ಆರಂಭದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ನಡೆದ ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ 186 ರನ್ ಸಿಡಿಸಿ ಸರಣಿಯನ್ನು 2-1 ರಿಂದ ಟೀಮ್ ಇಂಡಿಯಾ ಗೆಲ್ಲಲು ಮಹತ್ತರ ಕಾಣಿಕೆ ನೀಡಿದ್ದರು.
WTC Final: ಆಸ್ಟ್ರೇಲಿಯಾ ತಂಡಕ್ಕೆ ಆಘಾತ : ಪಂದ್ಯದಿಂದ ಸ್ಟಾರ್ ವೇಗದ ಬೌಲರ್ ಔಟ್
ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ತಮ್ಮ ಬ್ಯಾಟಿಂಗ್ ವೈಭವ ಮೆರೆದಿದ್ದ ಆರ್ಸಿಬಿಯ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ 14 ಪಂದ್ಯಗಳಿಂದ 2 ಶತಕ ಸೇರಿದಂತೆ 639 ರನ್ ಗಳಿಸಿದ್ದು, ಅದೇ ಲಯವನ್ನು ಡಬ್ಲ್ಯುಟಿಸಿ ಫೈನಲ್ನಲ್ಲೂ ಮುಂದುವರೆಸಲು ಎದುರು ನೋಡುತ್ತಿದ್ದು, ಅದಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
ಡಬ್ಲ್ಯುಟಿಸಿ ಫೈನಲ್ ಪಂದ್ಯದ ಅಂಗವಾಗಿ ಐಸಿಸಿ ರಿವ್ಯೂಯೊಂದಿಗೆ ಮಾತನಾಡಿರುವ ಕ್ಯಾಮೆರಾನ್ ಗ್ರೀನ್, ಆಸ್ಟ್ರೇಲಿಯಾಕ್ಕೆ ವಿರಾಟ್ ಕೊಹ್ಲಿಯ ಭಯ ನಿಜವಾಗಿಯೂ ಇದೆ. ದೊಡ್ಡ ಮಟ್ಟದ ಪಂದ್ಯಗಳಲ್ಲಿ ಅವರು ಯಾವಾಗಲೂ ಮುಂದೆ ನಿಂತು ಸಿಡಿಲಬ್ಬರದ ಪ್ರದರ್ಶನ ತೋರುವ ಆಟಗಾರರಾಗಿದ್ದಾರೆ ಎಂದು ಯುವ ಆಲ್ರೌಂಡರ್ ಹೇಳಿದ್ದಾರೆ.
“ವಿರಾಟ್ ಕೊಹ್ಲಿ ಮಹತ್ವದ ಪಂದ್ಯಗಳಲ್ಲಿ ಯಾವಾಗಲೂ ಮುಂದೆ ನಿಂತು ಆಡುವ ಆಟಗಾರ. ಡಬ್ಲ್ಯುಟಿಸಿ ಫೈನಲ್ ಪಂದ್ಯ ಖಂಡಿತವಾಗಿಯೂ ದೊಡ್ಡ ಕ್ಷಣವಾಗಿದ್ದು ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿರುದ್ಧ ಆಡಲು ಎದುರುನೋಡುತ್ತಿದ್ದೇನೆ,” ಎಂದಿದ್ದಾರೆ.
ರೋಹಿತ್ ಶರ್ಮಾ ಗುಣಗಾನ ಮಾಡಿದ ಗ್ರೀನ್
ಇದೇ ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಪರ ಆಡಿದ ಅನುಭವ ಗ್ರೀನ್ ಹಂಚಿಕೊಂಡಿದ್ದಾರೆ. “ರೋಹಿತ್ ನಾಯಕತ್ವದಲ್ಲಿ ಆಡಿದ್ದು ಶ್ರೇಷ್ಠ ಅನುಭವ ಎಂದಿರುವ ಅವರು ಮೈದಾನದಲ್ಲಿ ಭಾರತದ ನಾಯಕನ ಶಾಂತ ಮನೋಭಾವವನ್ನು” ಗ್ರೀನ್ ಪ್ರಶಂಸಿಸಿದ್ದಾರೆ.