ಮೈಸೂರು: ವ್ಯಾಪಾರದಲ್ಲಿ ನೀಡಿದ್ದ ಸಾಲದ ಹಣ ವಸೂಲಿ ಮಾಡಲು ಉದ್ಯಮಿಯನ್ನ ಹಾಡುಹಗಲೇ ಕಿಡ್ನಾಪ್ ಮಾಡಿದ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿಧ.ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳದಕೇರಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಉದ್ಯಮಿ ಪ್ರಕಾಶ್(35) ಎಂಬುವರನ್ನ ಅಪಹರಿಸಿದ 5 ಖದೀಮರ ಹೆಡೆಮುರಿಯನ್ನ ಖಾಕಿ ಪಡೆ ಕಟ್ಟಿಹಾಕಿದೆ.ಅಪಹರಣಕಾರರ ಕಪಿಮುಷ್ಠಿಯಲ್ಲಿದ್ದ ಉದ್ಯಮಿಯನ್ನ ಲಷ್ಕರ್ ಠಾಣಾ ಪೊಲೀಸರು ರಕ್ಷಿಸಿದ್ದಾರೆ.ರಾಜಾಸ್ಥಾನ್ ಮೂಲದ ದುಗ್ಗರ್ ಸಿಂಗ್,ಬದ್ದಾರಾಮ್ ಸೇರಿದಂತೆ 5 ಅಪಹರಣಕಾರರನ್ನ ಬಂಧಿಸಲಾಗಿದೆ.
ಹಳ್ಳದಕೇರಿಯಲ್ಲಿ ಲಲಿತಾ ಕಿಚನ್ ಸಪ್ಲೈಯರ್ಸ್ ಹೆಸರಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಪ್ರಕಾಶ್ ಕೆಲವು ದಿನಗಳ ಹಿಂದೆ ದುಗ್ಗರ್ ಸಿಂಗ್ ನಿಂದ ತಮಿಳುನಾಡಿನ ವ್ಯಾಪಾರಿಯೊಬ್ಬರಿಗೆ 5.6 ಲಕ್ಷ ಮೌಲ್ಯದ ಗುಟ್ಕಾ ಕೊಡಿಸಿದ್ದರು.ತಮಿಳುನಾಡಿನ ವ್ಯಾಪಾರಿ ಹಣ ಹಿಂದಿರುಗಿಸುವಲ್ಲಿ ವಿಳಂಬ ಮಾಡಿದ್ದರು.ಗುಟ್ಕಾ ಹಣಕ್ಕಾಗಿ ದುಗ್ಗರ್ ಸಿಂಗ್ ಒತ್ತಾಯ ಮಾಡುತ್ತಿದ್ದರು.ಇದೇ ವಿಚಾರದಲ್ಲಿ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು.ಜೂನ್ 26 ರಂದು ಪ್ರಕಾಶ್ ತಮ್ಮ ಅಂಗಡಿಯಲ್ಲಿ ಕುಳಿತಿದ್ದ ವೇಳೆ ದುಗ್ಗರ್ ಸಿಂಗ್,ಬದ್ದಾರಾಮ್ ಸೇರಿದಂತೆ 5 ಮಂದಿ ಅಟ್ಯಾಕ್ ಮಾಡಿ ಪ್ರಕಾಶ್ ರನ್ನ ಬಲವಂತವಾಗಿ ಕಾರಿನಲ್ಲಿ ಅಪಹರಿಸಿದ್ದಾರೆ.ಪಕ್ಕದ ಅಂಗಡಿಯವರು ಘಟನೆಯನ್ನ ಕಂಡು ಲಷ್ಕರ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಕೂಡಲೇ ಅಲರ್ಟ್ ಆದ ಲಷ್ಕರ್ ಠಾಣಾ ಪೊಲೀಸರು ಉದ್ಯಮಿ ಪ್ರಕಾಶ್ ರ ರಕ್ಷಣೆಗೆ ಮುಂದಾಗಿದ್ದಾರೆ.
ನಗರ ಪೊಲೀಸ್ ಆಯುಕ್ತ ಬಿ.ರಮೇಶ್,ಡಿಸಿಪಿ ಮುತ್ತುರಾಜ್ ಹಾಗೂ ಜಾಹ್ನವಿ ಮಾರ್ಗದರ್ಶನದಲ್ಲಿ ಎಸಿಪಿ ಶಾಂತಮಲ್ಲಪ್ಪ ಉಸ್ತುವಾರಿಯಲ್ಲಿ ಲಷ್ಕರ್ ಠಾಣೆ ಇನ್ಸ್ಪೆಕ್ಟರ್ ಬಿ.ಬಿ.ಸಂತೋಷ್ ನೇತೃತ್ವದಲ್ಲಿ ಎಸ್ಸೈ ಅನಿಲ್,ಸಿಬ್ಬಂದಿಗಖಾದ ಚೇತನ್ ,ಚಿನ್ನಪ್ಪ, ಮಂಜು, ಕಿರಣ್,ಮಹದೇವಸ್ವಾಮಿ, ಪ್ರದೀಪ್, ರಾಥೋಡ್,ಬಾಬು,ಪ್ರಕಾಶ್ ರವರನ್ನೊಳಗೊಂಡ ತಂಡ ರಚನೆಯಾಗಿ ಅಪಹರಣಕಾರರ ಜಾಡು ಪತ್ತೆಹಚ್ಚಲು ಮುಂದಾಗಿದೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಇನ್ಸ್ಪೆಕ್ಟರ್ ಸಂತೋಷ್ ಅಂಡ್ ಟೀಂ ಕಿಡ್ನಾಪರ್ಸ್ ಜಾಡು ಪತ್ತೆ ಹಚ್ಚಿದೆ.ಆನೇಕಲ್ ತಾಲೂಕಿನ ಜಿಗಣಿಯ ಕಟ್ಟಡವೊಂದರಲ್ಲಿ ಪ್ರಕಾಶ್ ರನ್ನ ಬಂಧಿಸಿದ್ದ ಮಾಹಿತಿ ಕಲೆ ಹಾಕಿದ ಸಂತೋಷ್ ಅಂಡ್ ಟೀಂ ದಾಳಿ ನಡೆಸಿದೆ.ದಾಳಿ ವೇಳೆ ಪ್ರತಿರೋಧಿಸಿದ 5 ಅಪಹರಣಕಾರರನ್ನ ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಕಿಡ್ನಾಪರ್ಸ್ ಬಂಧನದಲ್ಲಿದ್ದ ಉದ್ಯಮಿ ಪ್ರಕಾಶ್ ರನ್ನ ಲಷ್ಕರ್ ಠಾಣಾ ಪೊಲೀಸರು ಸೇಫ್ ಆಗಿ ಕರೆತಂದಿದ್ದಾರೆ.5 ಲಕ್ಷ ಸಾಲ ವಸೂಲಿ ಮಾಡಲು ಅಪಹರಣದ ದಾರಿ ಹಿಡಿದ ಆರೋಪಿಗಳು ಜೈಲು ಸೇರಿದ್ದಾರೆ