ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರ ಆದ ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಜನವೋಜನ. ದೇವಾಸ್ಥಾನಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ ಎಂದರೆ ತಪ್ಪಾಗಲಾರದು. ಬೆಳಗ್ಗೆ 5.30ರಿಂದ ರಾತ್ರಿ 12.30ರವರೆಗೆ ತಾಯಿ ಚಾಮುಂಡಿ ದರ್ಶನಕ್ಕೆ ಸಾರ್ವಜನಿಕ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಬೆಳಗ್ಗಿನ ಜಾವದಿಂದಲೇ ಜನರು ಕ್ಯೂ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ
ಆಷಾಢ ಮಾಸದ ಮೊದಲ ಶುಕ್ರವಾರ ದೇವಿ ಭಕ್ತರನ್ನು ಆಶೀರ್ವಾದಿಸಲು ಬರುತ್ತಾಳೆ ಎಂಬ ನಂಬಿಕೆ ಜನರಲ್ಲಿದೆ. ಈ ದಿನ ದೇವಿಯ ದರ್ಶನ ಪಡೆದರೆ ಸಹಸ್ರ ಪುಣ್ಯದ ಫಲ ದೊರೆಯಲಿದೆ ಎಂಬ ಪ್ರತೀತಿ ಕೂಡ ಇದೆ. ಇದೇ ಕಾರಣದಿಂದ ಸಾವಿರಾರು ಜನರು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಅಲ್ಲದೇ ಭಕ್ತರು ವಿವಿಧ ಸೇವೆಗಳನ್ನು ಹಾಗೂ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ. ಈ ಬಾರಿಯ ಆಷಾಢದಲ್ಲಿ 5 ಶುಕ್ರವಾರಗಳು ಸಿಗಲಿದ್ದು ಆ ದಿನಗಳಲ್ಲಿ ದೇವಿಗೆ ವಿಶೇಷ ಪೂಜೆಗಳು ನೆರವೇರಲಿದೆ. ಭಕ್ತರಿಗೆ ಪ್ರಸಾದ ವಿತರಣೆ ಮಾಡುವವರು ಅಧಿಕಾರಿಗಳಿಂದ ಅನುಮತಿ ಪಡೆಯಲು ಜಿಲ್ಲಾಡಳಿತ ಸೂಚಿಸಿದೆ.
ವಿಶೇಷ ದರ್ಶನಕ್ಕೆ 50 ರೂ. 300 ರೂ. ವಿಶೇಷ ಪಾಸ್ ವ್ಯವಸ್ಥೆ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ 46 ಶಾಶ್ವತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೇ ಆದಷ್ಟು ಪ್ಲಾಸ್ಟಿಕ್ನ್ನು ಬಳಸದೆ ಆಷಾಢ ಆಚರಿಸುವ ಪಣ ತೊಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ತಿಳಿಸಿದ್ದಾರೆ.