ಲೂಸಿಯಾ ಖ್ಯಾತಿಯ ಪವನ್ ಕುಮಾರ್ ನಿರ್ದೇಶನದ, ಮಲಯಾಳಂನ ಸ್ಟಾರ್ ನಟ ಫಾಹರ್ ಫಸಿಲ್ ನಟನೆಯ ಧೂಮಂ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರ್ತಿದೆ. ನಿರ್ದೇಶಕ, ನಿರ್ಮಾಪಕರಿಬ್ಬರೂ ಕನ್ನಡದವರೇ ಆಗಿದ್ದರೂ ಸಹ ಧೂಮಂ ಮಲಯಾಳಂ ಸಿನಿಮಾ ಆಗಿದ್ದು ಕನ್ನಡದಲ್ಲಿ ಡಬ್ ಆಗಿ ಬಿಡುಗಡೆ ಆಗಲಿದೆ.
ಧೂಮಂ ಸಿನಿಮಾ ಪ್ರಾರಂಭವಾಗಿದ್ದು ದ್ವಿತ್ವ ಸಿನಿಮಾ ನಿಂತು ಹೋಗಿದ್ದಕ್ಕೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ದ್ವಿತ್ವ ಸಿನಿಮಾ ಮಾಡಲು ಪವನ್ ಕುಮಾರ್ ಮುಂದಾಗಿದ್ದರು. ಆ ಸಿನಿಮಾವನ್ನು ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಗಳಲ್ಲಿ ಒಟ್ಟಿಗೆ ನಿರ್ಮಿಸಲು ಹೊಂಬಾಳೆ ನಿರ್ಮಾಣ ಸಂಸ್ಥೆ ರೆಡಿಯಾಗಿತ್ತು. ಅದಕ್ಕಾಗಿ ಅಪ್ಪುವಿನ ಫೋಟೋ ಶೂಟ್ ಕೂಡ ನಡೆದಿತ್ತು. ಆದ್ರೆ ಆ ಮಧ್ಯೆಯೇ ನಟ ಪುನೀತ್ ರಾಜ್ ಕುಮಾರ್ ನಿಧನರಾದರು. ಬಳಿಕ ದ್ವಿತ್ವ ಸಿನಿಮಾ ನಿಂತು ಹೋಯಿತು. ಅಂದ ಹಾಗೆ ದ್ವಿತ್ವ ಮಾತ್ರವಲ್ಲ ಧೂಮಂ ಚಿತ್ರಕ್ಕೂ ಅಪ್ಪು ಅವರೇ ನಾಯಕರಾಗಬೇಕಿತ್ತಂತೆ.