ಮಂಡ್ಯ :- ಎಸ್.ಎಂ.ಶಂಕರ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ವಿಧಾನ ಪರಿಷತ್ ಮಾಜಿ ಸದಸ್ಯ ದಿ. ಎಸ್.ಎಂ.ಶಂಕರ್ ಅವರ 4 ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಗುರುವಾರ ಪಠ್ಯ ಪರಿಕರಗಳನ್ನು ವಿತರಿಸಲಾಯಿತು. ಮದ್ದೂರು ತಾಲೂಕಿನ ಚಾಮನಹಳ್ಳಿ ಮತ್ತು ಸೋಮನಹಳ್ಳಿ ಗ್ರಾಮಗಳ ಸರ್ಕಾರಿ ಶಾಲೆಗಳ ನೂರಾರು ವಿದ್ಯಾರ್ಥಿಗಳಿಗೆ ಪಠ್ಯ ಪರಿಕರಗಳನ್ನು ವಿತರಣೆ ಮಾಡಿ ಮಾತನಾಡಿದ,
ಯುವ ಮುಖಂಡ ರಘು ಕಳೆದ ನಾಲ್ಕು ವರ್ಷಗಳಿಂದ ಟ್ರಸ್ಟ್ ವತಿಯಿಂದ ಈಗಾಗಲೇ ಸೋಮನಹಳ್ಳಿ ಗ್ರಾಮ ಪಂಚಾಯಿತಿ ಗೆ ಅಂತಿಮ ಯಾತ್ರೆ ವಾಹನ, ಕ್ಷೇತ್ರದ ಹಾಲು ಉತ್ಪಾದಕರಿಗೆ ಉಚಿತ ಹಾಲಿನ ಕ್ಯಾನ್ ವಿತರಣೆ, ಹಲವು ದೇವಾಲಯಗಳ ಜೀರ್ಣೋದ್ಧಾರಕ್ಕೆ ಆರ್ಥಿಕ ಸಹಾಯ ಸೇರಿದಂತೆ ಸಾಮಾಜಿಕ ಸೇವೆಗಳನ್ನು ಹಮ್ಮಿಕೊಳ್ಳುವ ಜನರಿಗೆ ಟ್ರಸ್ಟ್ ವತಿಯಿಂದ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಎಸ್.ಎಂ.ಶಂಕರ್ ಅವರು ಜೀವಿತಾವಧಿಯಲ್ಲಿ ನೊಂದವರ ಬಾಳಿಗೆ ಬೆಳಕಾಗುವ ಮೂಲಕ ಸಾವಿರಾರು ಜನರಿಗೆ ಸಹಾಯ ಹಸ್ತ ಚಾಚಿದ್ದರು. ಇವರ ಸಾವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಬಣ್ಣಿಸಿದರು. ಇದೇ ವೇಳೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಟವಲ್ ಕೃಷ್ಣಪ್ಪ, ಮುಖಂಡರಾದ ಪುರುಷೋತ್ತಮ್, ಹೆಚ್.ಜಿ.ಕೃಷ್ಣ ಹಾಗೂ ಶಾಲಾ ಸಿಬ್ಬಂದಿ ಹಾಜರಿದ್ದರು.