ಬೆಂಗಳೂರು ;- ಬರೋಬ್ಬರಿ 7 ವರ್ಷ ಕಳೆದರೂ ನಾಡಪ್ರಭು ಕೆಂಪೇಗೌಡ ಬಡಾವಣೆ ಸಮಗ್ರ ಅಭಿವೃದ್ಧಿ ಕಂಡಿಲ್ಲ ಯಾಕೆ ಎಂದು ವಿಧಾನಪರಿಷತ್ ಸದಸ್ಯ ಟಿಎ ಶರವಣ ಪ್ರಶ್ನಿಸಿದ್ದಾರೆ.
ಸದನದಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಟಿಎ ಶರವಣ ಅವರು, ಬಿಡಿಎಯಿಂದ 4040 ಎಕರೆ ವಿಸ್ತೀರ್ಣದಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಿಸಲು ಪ್ರಾರಂಭವಾಗಿ ಬರೋಬ್ಬರಿ 7 ವರ್ಷ ಕಳೆದರೂ ಕೂಡ, ಅಭಿವೃದ್ಧಿ ಕಾಮಗಾರಿ ಕುಂಠಿತಗೊಂಡಿದೆ.
2700 ಎಕರೆ ಜಮೀನು ಅಭಿಯಂತರರ ವಿಭಾಗಕ್ಕೆ ಹಸ್ತಾಂತರ ಆಗಿದೆ. ಉಳಿದ ಜಮೀನು ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದೆ. ಹಾಗೂ ಸಮಸ್ಯೆಗಳು ಇರುವುದರಿಂದ ಭೂಸ್ವಾಧೀನ ಸಮಸ್ಯೆ ಎದುರಾಗುತ್ತಿದೆ.
ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿದರು ಪರಿಹಾರ ಕಂಡುಕೊಂಡಿಲ್ಲ. ಇನ್ನೂ ಕೆಂಪೇಗೌಡ ಲೇಔಟ್ ಗೆ ಸಂಬಂಧಿಸಿದಂತೆ RERA ದಲ್ಲಿ ಕೇಸು ದಾಖಲಾಗಿ ವಿಚಾರಣೆ ಮಾಡಲಾಗಿದೆ.
2021-22 ರ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿದ್ದು, ಆದರೆ ಅದನ್ನು ಪೂರ್ಣಗೊಳಿಸುವಲ್ಲಿ ಬಿಡಿಎ ಸಂಪೂರ್ಣ ವಿಫಲವಾಗಿದೆ. ಸ್ಪಷ್ಟ ಪರಿಹಾರ ಕೋರಿ ಭೂಮಿ ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ ಎಂದು ಬೇಸರ ಹೊರ ಹಾಕಿದರು.
ಮುಂದುವರೆದು ಈ ಬಡಾವಣೆಯಲ್ಲಿ ಒಟ್ಟು 10 ಸಾವಿರ ಮನೆ ಹಂಚಿಕೆ ಮಾಡಿದ್ದು, ನಿವೇಶನ ಪಡೆದ ಜನರು ಬ್ಯಾಂಕ್ನಿಂದ ಮನೆ ನಿರ್ಮಾಣಕ್ಕೆ ಸಾಲ ಪಡೆದು ವಾಣಿಜ್ಯ ಬಡ್ಡಿ ದರ ಗೃಹ ಸಾಲ ಬಡ್ಡಿ ದರದಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಬಡಾವಣೆಯ ವಿವಿಧೆಡೆಯಲ್ಲಿ ನಿವೇಶನ ಅಭಿವೃದ್ಧಿ, ರಸ್ತೆ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕೆಂದು ನಗರದ ಇಲಾಖೆಯ ಸಚಿವರನ್ನು ಟಿಎ ಶರವಣ ಅವರು ಒತ್ತಾಯಿಸಿದ್ದಾರೆ.