ಬೆಂಗಳೂರು: ರಾಜ್ಯದಲ್ಲಿ 754 ವಿದೇಶಿಗರು ವೀಸಾ ಮುಗಿದರೂ ಅಕ್ರಮವಾಗಿ ವಾಸವಾಗಿದ್ದಾರೆ. ವೀಸಾ ಅವಧಿ ಮುಗಿದವರನ್ನು ಶೀಘ್ರವಾಗಿ ವಾಪಸ್ ಕಳುಹಿಸುವ ಕೆಲಸ ಮಾಡುತ್ತೇವೆ ಹಾಗೆ ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳಿಗೆ ಸ್ಥಳಾವಕಾಶದ ಕೊರತೆ ಇದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ವಿಧಾನ ಪರಿಷತ್ ಕಲಾಪದ (Session) ವೇಳೆ ಬಿಜೆಪಿಯ (BJP) ಪ್ರತಾಪ್ ಸಿಂಹ ನಾಯಕ್ ಕಾರಾಗೃಹಗಳ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಸಚಿವರು ಕಾರಾಗೃಹಗಳಲ್ಲಿ ಸ್ಥಳಾವಕಾಶಕ್ಕಿಂತ ಹೆಚ್ಚು ಕೈದಿಗಳಿದ್ದಾರೆ. ರಾಜ್ಯದಲ್ಲಿ 54 ವಿವಿಧ ಮಾದರಿಯ ಕಾರಾಗೃಹಗಳಿವೆ. ಇದರಲ್ಲಿ 28 ಕಾರಾಗೃಹಗಳಲ್ಲಿ ಸ್ಥಳಾವಕಾಶಕ್ಕಿಂತ ಹೆಚ್ಚು ಕೈದಿಗಳನ್ನು ಇರಿಸಲಾಗಿದೆ ಎಂದಿದ್ದಾರೆ
ವಿದೇಶಿ ಪ್ರಜೆಗಳು ವಿದ್ಯಾಭ್ಯಾಸ, ಪ್ರವಾಸಕ್ಕೆ ಸೇರಿ ಹಲವು ವಿಚಾರಕ್ಕೆ ರಾಜ್ಯಕ್ಕೆ ಬರುತ್ತಾರೆ. ರಾಜ್ಯದಲ್ಲಿ ಸುಮಾರು 4,890 ವಿದೇಶಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಬಂದಿದ್ದಾರೆ. ಇದಲ್ಲದೆ ಒಟ್ಟಾರೆ ಬೆಂಗಳೂರು (Bengaluru) ನಗರ ಮತ್ತು ಉಳಿದ ಜಿಲ್ಲೆಯಲ್ಲಿ ಒಟ್ಟು 8,862 ವಿದೇಶಿಯರು ವಿದೇಶಿ ವೀಸಾದ ಮೇಲೆ ನೆಲೆಸಿದ್ದಾರೆ. ಇದರಲ್ಲಿ 754 ವಿದೇಶಿಯರು ವೀಸಾ ಮುಕ್ತಾಯವಾದರೂ ಇಲ್ಲೇ ಇದ್ದಾರೆ ಎಂದು ಮಾಹಿತಿ ನೀಡಿದರು.