ಮಂಡ್ಯ :- ಸಹೋದರ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ದಿ. ಎಸ್.ಎಂ.ಶಂಕರ್ ರವರ 4 ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಗುರುವಾರ ಬೆಳಿಗ್ಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರವರು ಭಾಗವಹಿಸಿ ಪೂಜಾ ಕಾರ್ಯಗಳಲ್ಲಿ ಭಾಗಿಯಾದರು. ಪ್ರತಿ ವರ್ಷವೂ ತಪ್ಪದೇ ಆಗಮಿಸುತ್ತಿರುವ ಎಸ್.ಎಂ.ಕೃಷ್ಣ ಅವರು ಇಂದು ಸಹ ಬೆಂಗಳೂರಿನಿಂದ ಬೆಳಿಗ್ಗೆ ಆಗಮಿಸಿ ಮದ್ದೂರು ತಾಲೂಕಿನ ಸ್ವಗ್ರಾಮ ಸೋಮನಹಳ್ಳಿಯ ಎಸ್.ಸಿ.ಮಲ್ಲಯ್ಯ ವಿದ್ಯಾಸಂಸ್ಥೆ ಆವರಣದಲ್ಲಿರುವ ಸಹೋದರ ಎಸ್.ಎಂ.ಶಂಕರ್ ಹಾಗೂ ತಂದೆ ಎಸ್.ಸಿ.ಮಲ್ಲಯ್ಯ ರವರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ ಭಾವುಕರಾದರು.
ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಅಭಿಮಾನಿಗಳು, ಹಿತೈಷಿಗಳು ಹಾಗೂ ಸಂಬಂಧಿಕರೊಂದಿಗೆ ಕೆಲ ಕಾಲ ಕುಶಲೋಪರಿಗಳನ್ನು ಚರ್ಚಿಸಿದರು. ಬಳಿಕ ಸೋಮನಹಳ್ಳಿಯ ತಮ್ಮ ನಿವಾಸಕ್ಕೆ ತೆರಳಿ ಮನೆಯಲ್ಲೂ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತಮ್ಮ ಆಪ್ತರು ಮತ್ತು ಸಂಬಂಧಿಕರೊಟ್ಟಿಗೆ ಭೋಜನ ಸೇವಿಸಿದರು. ನಂತರ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮುನ್ನಡೆದರು.
ಇದಕ್ಕೂ ಮುನ್ನ ತಾಲ್ಲೂಕಿನ ಯರಗನಹಳ್ಳಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ನಾಗಲಿಂಗೇಶ್ವರ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ತಮ್ಮ ಆಪ್ತರಾದ ಕಾಡಾ ಮಾಜಿ ಅಧ್ಯಕ್ಷ ಶಿವಲಿಂಗಯ್ಯ ಅವರ ಪೆಟ್ರೋಲ್ ಬಂಕ್ ಗೆ ತೆರಳಿ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಎಳೆನೀರು ಸೇವಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ದಿ.ಎಸ್.ಎಂ.ಶಂಕರ್ ಪತ್ನಿ ನಾಗವೇಣಿ, ಪುತ್ರ ಜಿ.ಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್, ಸೊಸೆ ಶೃತಿ, ಮಾಜಿ ಶಾಸಕ ಡಿ.ಸಿ.ತಮ್ಮಣ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ನಿರ್ದೇಶಕ ಪಿ.ಸಂದರ್ಶ್, ಪುರಸಭಾ ಸದಸ್ಯೆ ಪ್ರಿಯಾಂಕಾ ಅಪ್ಪುಗೌಡ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಪಿ.ರಾಘವಾ ಮುಖಂಡರಾದ ಹೂತಗೆರೆ ಪ್ರಸನ್ನ, ಮಹೇಶ್, ಸಿದ್ದು, ಸಿ.ನಾಗೇಗೌಡ, ಡಿ.ಟಿ.ಸಂತೋಶ್, ರಾಮಚಂದ್ರು, ಪುರುಷೋತ್ತಮ್, ಮನು ಇದ್ದರು.