ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಧಿಕಾರಿಗಳ ವರ್ಗಾವಣೆ ಬಗ್ಗೆ ಆರೋಪ ಮಾಡುತ್ತಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೃಷಿ ಇಲಾಖೆ ಅಧಿಕಾರಿಗಳ ವರ್ಗಾವಣೆ ಮತ್ತು ವಿವಿಧ ಯೋಜನೆಗಳಿಗೆ ನಿಗದಿ ಪಡಿಸಲಾಗಿದ್ದ ಕಮಿಷನ್ ದರಪಟ್ಟಿಯನ್ನು ವಿಧಾನಸಭೆಗೆ ಸಲ್ಲಿಸಿದ್ದಾರೆ.
ರಾಜ್ಯದ ಜನ ಇಷ್ಟು ದಿನ ಟೊಮ್ಯಾಟೋ, ತರಕಾರಿ,ಆಹಾರ ಧಾನ್ಯ, ಗ್ಯಾಸ್ ಇತ್ಯಾದಿಗಳ ಬೆಲೆ ಏರಿಕೆಯಿಂದ ಚಕಿತರಾಗಿ ಬಸವಳಿದು ಹೋಗಿದ್ದಾರೆ.ಈಗ ವರ್ಗಾವಣೆ ದರಪಟ್ಟಿಯಿಂದ ಅಧಿಕಾರಿ, ನೌಕರರೂ ಹೌಹಾರಿದ್ದಾರೆ.ಇದು ಕಾಂಗ್ರೆಸ್ ಸರಕಾರದ 6ನೇ ಗ್ಯಾರಂಟಿ. ಒಂದು ಕಡೆ ಉಚಿತ ಕೊಡುಗೆಯಾದ್ರೆ ಇನ್ನೊಂದು ಕಡೆ ಖಚಿತ ಸುಲಿಗೆ ಎಂದು ಟ್ವೀಟ್ ಮೂಲಕ ವ್ಯಂಗ್ಯ ಮಾಡಿದ್ದಾರೆ.
ಭಾಗ್ಯಗಳ ಮೇಲೆ ಭಾಗ್ಯಗಳನ್ನು ಕೊಟ್ಟ ಕಾಂಗ್ರೆಸ್ ಸರಕಾರ ಕೊಡುತ್ತಿರುವ ವರ್ಗಾವಣೆ ‘ ಸಂಕಷ್ಟಭಾಗ್ಯ ‘ಎಂದು ಟೀಕೆ ಮಾಡಿದೆ. ಕೊಡುಗೆ ಮತ್ತು ಸುಲಿಗೆ ಒಟ್ಟೊಟ್ಟಿಗೆ ಕೊಂಡೊಯ್ಯುವುದೇ ಅಭಿವೃದ್ದಿಯ ಹೊಸ ಭರವಸೆ, ಹೊಸ ಕನಸು ಎಂಬುದು ನನಗೆ ಈಗಷ್ಟೇ ಅರ್ಥವಾಗಿದೆ. ಕರ್ನಾಟಕ ಮಾದರಿ ಅಭಿವೃದ್ಧಿ ಎಂದರೆ ಇದೇನಾ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಹಿಂದಿನ ಸರಕಾರದ ವಿರುದ್ಧ ರೇಟ್ ಕಾರ್ಡ್ ಬಿಡುಗಡೆ ಮಾಡಿ ಪ್ರಚಾರ ಮಾಡಿತ್ತು. ಈಗ ಕೈ ಸರಕಾರದ ರೇಟ್ ಕಾರ್ಡ್ ಎಲ್ಲರ ಕೈಗಳಲ್ಲೂ ನಲಿದು ನರ್ತಿಸುತ್ತಿದೆ ಎಂದು ವ್ಯಂಗ್ಯವಾಡಿದರು.