ಬೆಂಗಳೂರು: ಈ ಡಿಜಿಟಲ್ ಆಪ್ ಗಳ ಮೂಲಕ ಸಾಲ ನೀಡುವ ಅಕ್ರಮ ಕಂಪನಿಗಳು ಜನರಿಗೆ ಕಿರುಕುಳ ನೀಡಿವೆ. ಈ ಕಂಪನಿಗಳು ಸಾಲ ನೀಡಿ ಜನರನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತಿವೆ. ಸಾಲಬಾಧೆ ತಾಳಲಾರದೆ ಆತ್ಮಹತ್ಯೆಯಂತಹ ಹೆಜ್ಜೆ ಇಡಲು ಯತ್ನಿಸಿದಂತಹ ಅನೇಕ ಪ್ರಕರಣಗಳು ಮುನ್ನೆಲೆಗೆ ಬಂದಿವೆ.
ರಾಜಧಾನಿಯಲ್ಲಿ 2023ರಲ್ಲಿ ಲೋನ್ ಆ್ಯಪ್ ಕಂಪೆನಿಗಳ ಕಿರುಕುಳದ ಸಂಬಂಧ 900 ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಒಂದೇ ಪ್ರಕರಣದಲ್ಲಿ 15 ಲೋನ್ ಆ್ಯಪ್ಗಳ ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಸೈಬರ್ ಪೊಲೀಸರು ದೂರು ದಾಖಲಿಸಿದ್ದಾರೆ.
15 ಆ್ಯಪ್ ಯಾವುವು
ಈಸಿ ಮನಿ ಲೋನ್ ಆ್ಯಪ್, ಸ್ಯಾಲರಿ ಪ್ಲೀಸ್, ಈಸಿ ಲೋನ್, ಕ್ಯಾಸ್ ಮೀ, ಪ್ಯಾಕೆಟ್ ಮೀ, ಗೆಟ್ ರುಪಿ, ಇಸ್ ಕ್ಯಾಸ್, ಮನಿ, ರೈನ್ ಬೌ ಮನಿ, ಮ್ಯಾಜಿಕ್ ಲೋನ್, ಹೋಮ್ ಕೇಸ್ ಡೆಲ್ಲಿಕ್ರೆಡಿಟ್, ಶೈನಿ ಲೋನ್, ಗೋಮನಿ, ಕೂಲ್ ರುಪಿ ಲಟ್ರ, ನಾನ್ ರುಪಿ ಲೋನ್ ಆ್ಯಪ್ಗಳ ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಆರಂಭಿಸಿರುವ ಖಾಕಿ ಪಡೆಯು ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.
ಆನ್ಲೈನ್ ಆ್ಯಪ್ ಮೂಲಕ ಸಾಲ ಪಡೆದಿದ್ದ ದೂರುದಾರರೊಬ್ಬರು ಕೆಲ ದಿನಗಳ ಬಳಿಕ ಸಾಲ ಮರುಪಾವತಿಸಿದ್ದರು. ಆದರೂ, ಸೈಬರ್ ದುರುಳರು ದೂರುದಾರರ ಆಧಾರ್ ಮತ್ತು ಪಾನ್ ಮೂಲಕ ವೈಯಕ್ತಿಕ ಮಾಹಿತಿ ಕದ್ದಿದ್ದರು. ಅವರ ಮೊಬೈಲ್ ಸಹ ಹ್ಯಾಕ್ ಮಾಡಿದ್ದರು. ಅವರ ಭಾವಚಿತ್ರವನ್ನು ಮಾರ್ಫಿಂಗ್ ಮಾಡಿ ಅಶ್ಲೀಲ ವಿಡಿಯೊದೊಂದಿಗೆ ಜೋಡಿಸಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ವಾಟ್ಯಾಪ್ಸ್ ಸಂಖ್ಯೆಗೆ ಕಳುಹಿಸಿ ಮಾನ ಹರಾಜಿಗೆ ಯತ್ನಿಸಿದ್ದರು. ದೂರುದಾರರು ಈ ಸಂಬಂಧ ಸೈಬರ್ ಠಾಣೆಗೆ ದೂರು ಕೊಟ್ಟಿದ್ದರು.
ಸಾವಿರಾರು ಮಂದಿ ಆನ್ಲೈನ್ ಲೋನ್ ಆ್ಯಪ್ಗಳಿಂದ ಸಾಲ ಪಡೆದು ವಂಚನೆಗೆ ಒಳಗಾಗುತ್ತಿದ್ದಾರೆ. ಈ ಪ್ರಕರಣಗಳ ಬೆನ್ನತ್ತಿದರೆ ಕರ್ನಾಟಕದವರೇ ಸಿಕ್ಕಿ ಬೀಳುತ್ತಿದ್ದಾರೆ. ಹೊರ ರಾಜ್ಯ, ವಿದೇಶದಲ್ಲಿ ಕುಳಿತು ನಕಲಿ ಜಾಲ ಸೃಷ್ಟಿಸಿರುವ ವಂಚಕರು ಪತ್ತೆಯಾಗುತ್ತಿಲ್ಲ. ಲೋನ್ ಆ್ಯಪ್ ಬ್ಯಾಂಕ್ ಖಾತೆಗಳಿಂದ ಈವರೆಗೆ 87 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತರಾದ ಶರಣಪ್ಪ ಮಾಹಿತಿ ಹಂಚಿಕೊಂಡಿದ್ದಾರೆ.