ಬೆಂಗಳೂರು: ನೈಸ್ ಯೋಜನೆಗೆ ಸಂಬಂಧಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಪ್ರಹಾರ ನಡೆಸಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ನೈಸ್ ಯೋಜನೆಗೆ ಒಪ್ಪಂದ ಮಾಡಿಕೊಳ್ಳಲಾಯಿತು ಎಂದು ಹೇಳಿದ್ದ ಡಿಕೆಶಿ ಅವರ ವಿರುದ್ಧ ಕಿಡಿಕಿಡಿಯಾಗಿರುವ ಅವರು, ನೈಸ್ ಅಕ್ರಮಗಳಲ್ಲಿ ನಿಮ್ಮ ಪಾತ್ರವೇನು ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಡಿಕೆಶಿ ಹಾಗೂ ಕೆಲ ಅಧಿಕಾರಿಗಳ ವಿರುದ್ಧ ಗಂಭೀರ ಅರೋಪ ಮಾಡಿದ್ದಾರೆ.
ಇದೇನು ಬುಲ್ಡೋಜ್ ಬೆಂಗಳೂರಾ?:
ನೈಸ್ ಯೋಜನೆಗೆ ಹೆಚ್.ಡಿ.ದೇವೇಗೌಡರೇ ಸಹಿ ಹಾಕಿದ್ದು ಎಂದು ಹೇಳುವ ಮೂಲಕ ತಾವು ಎಸಗಿದ ಅಕ್ರಮಕ್ಕೆ ತೇಪೆ ಹಚ್ಚಲು ಹೊರಟಿದ್ದಾರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು. ಆದರೆ, ಅದೇ ದೇವೇಗೌಡರ ಕಾಲದಲ್ಲಿ ಆಗಿದ್ದ ಮೂಲ ಒಪ್ಪಂದದ ಬಗ್ಗೆ ಅವರದ್ದು ಧ್ಯಾನಸ್ಥ ಮೌನ!! ಯಾಕೆ?? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಬುಲ್ಡೋಜ್ ಬೆಂಗಳೂರು ಹಾಗೂ ಬುಲ್ಡೋಜ್ ಕರ್ನಾಟಕ ಎಂದು ಹ್ಯಾಷ್ ಟ್ಯಾಗ್ ಮಾಡಿ ನೇರವಾಗಿ ಡಿಕೆಶಿ ಅವರನ್ನು ಕುಟುಕಿದ್ದಾರೆ.
ನೈಸ್ ರಸ್ತೆಯ ‘ತಿರುಚಿದ ಒಪ್ಪಂದ’ದ ಬಗ್ಗೆಯೂ ಡಿಕೆಶಿ ಅವರು ಹೇಳಬೇಕಿತ್ತಲ್ಲವೇ? ಬ್ರ್ಯಾಂಡ್ ಬೆಂಗಳೂರು ಟೀಮಿನ ಮುಖ್ಯಸ್ಥರ ಕರಾಮತ್ತಿನ ಬಗ್ಗೆಯೂ ಬೆಳಕು ಚೆಲ್ಲಬೇಕಲ್ಲವೇ? ಅದು ಬಿಟ್ಟು, ಸತ್ಯ ಮರೆಮಾಚಿ ಬರೀ ‘ಸಹಿ’ಯ ಬಗ್ಗೆ ನೀವು ಗೊಣಗಿದ್ದು ಯಾಕೆ? ಸದನ ಸಮಿತಿ ವರದಿಯ ಬಗ್ಗೆಯೂ ಚಕಾರ ಎತ್ತದಿರುವುದು ಯಾಕೋ? ಏನಿದು ಈ ನಿಗೂಢ ಸೋಜಿಗ?? ಎಂದು ಕುಮಾರಸ್ವಾಮಿ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮೂಲ ಒಪ್ಪಂದ ನೆನಪಿಸಿದ ಹೆಚ್ ಡಿಕೆ:
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಉರುಫ್ ನೈಸ್ ರಸ್ತೆ ಯೋಜನೆಗೆ ರಾಜ್ಯ ಸರಕಾರದಿಂದ ನಯಾಪೈಸೆ ಕೊಡುವುದಿಲ್ಲ, ಪೂರ್ಣ ಹೂಡಿಕೆ ಹಣವನ್ನು ಕಂಪನಿಯೇ ಭರಿಸಬೇಕು, ಭೂಸ್ವಾಧೀನವೂ ಸೇರಿ ಸರಕಾರದ ಮೇಲೆ ಯಾವುದೇ ಹೊರೆ ಇರುವಂತಿಲ್ಲ. ಇದು ದೇವೇಗೌಡರ ಕಾಲದಲ್ಲಿ ಆದ ಮೂಲ ಒಪ್ಪಂದದ ಸಾರಾಂಶ. ಹಾಗಾದರೆ, ಈ ಯೋಜನೆ ‘ಸಾರ’ವಾಗಿದ್ದು ಯಾರಿಗೆ? ಎಂದು ಉಪ ಮುಖ್ಯಮಂತ್ರಿಗಳನ್ನು ಕುಟುಕಿದ್ದಾರೆ.
![Demo](https://prajatvkannada.com/wp-content/uploads/2023/08/new-Aston-Band.jpeg)