ನವದೆಹಲಿ: ಎಲ್ಲಿಯವರೆಗೆ ಪಾಕ್ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತೋ ಅಲ್ಲಿಯವರೆಗೆ ಮಾತುಕತೆ ಇಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈಶಂಕರ್, ಪಾಕಿಸ್ತಾನದಲ್ಲಿ (Pakistan) ಸಮಸ್ಯೆಗಳಿವೆ ಎಂಬುದು ನಮಗೆ ತಿಳಿದಿದೆ.
ಹಾಗೂ ಸಮಸ್ಯೆಗಳ ಗಂಭೀರತೆಯನ್ನು ಗುರುತಿಸುವ ಸಮಯ ಇದಾಗಿದೆ. ಪಾಕಿಸ್ತಾನ ಕತ್ತಲಿನ ವೇಳೆಯಲ್ಲಿ ಭಯೋತ್ಪಾದನೆಯನ್ನು ನಡೆಸಿ, ಹಗಲಿನ ವೇಳೆಯಲ್ಲಿ ವ್ಯಾಪಾರವನ್ನು ನಡೆಸುವ ಪರಿಸ್ಥಿತಿಯನ್ನು ಭಾರತ ಎಂದಿಗೂ ಸಹಿಸುವುದಿಲ್ಲ. ಹಾಗೇನಾದರೂ ಆದರೆ ದೇಶ ಸರಿಯಾಗಿ ಕಾರ್ಯ ನಿರ್ವಹಿಸುವುದರಲ್ಲಿ ವಿಫಲವಾಗುತ್ತದೆ ಎಂದು ಹೇಳಿದ್ದಾರೆ.
ಗಡಿಯಲ್ಲಿ ಶಾಂತಿ ನಿರ್ಮಾಣದತ್ತ ಚೀನಾ ಮುಖ ಮಾಡಬೇಕು:
ಭಾರತ ಹಾಗೂ ಚೀನಾ (China) ನಡುವಿನ ಗಡಿ ಭಾಗದ ಸ್ಥಿತಿ ಇಂದಿಗೂ ಅಸಹಜವಾಗಿದೆ. ಗಡಿ ನಿರ್ವಹಣೆಗೆ ಸಂಬಂಧಿಸಿದ ಒಪ್ಪಂದ ಗಳ ಉಲ್ಲಂಘನೆಯಾಗಿರುವುದರಿಂದಾಗಿ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಕಷ್ಟದ ಹಂತದಲ್ಲಿ ಸಾಗುತ್ತಿದೆ. ಯಾವುದೇ ಸಂಬಂಧಗಳು ಪರಸ್ಪರರ ಆಸಕ್ತಿಗಳನ್ನು ಹಾಗೂ ಸೂಕ್ಷ್ಮತೆಗಳಿಗೆ ಗೌರವ ನೀಡಬೇಕು. ಚೀನಾ ಗಡಿಯಲ್ಲಿ ಶಾಂತಿ ನಿರ್ಮಾಣದತ್ತ ಮುಖ ಮಾಡಬೇಕು. ಶಾಂತಿ ಒಪ್ಪಂದಗಳನ್ನು ಮೀರಿ ಕೃತ್ಯಗಳನ್ನು ನಡೆಸಿದರೆ ಕಷ್ಟ ಎಂದು ಜೈಶಂಕರ್ ಹೇಳಿದರು.