ಬೆಂಗಳೂರು: ಇದೇ ಏ.30ರಂದು ರಾಮನಗರ (Ramanagara) ಜಿಲ್ಲೆಯ ಚನ್ನಪಟ್ಟಣಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಆಗಮನ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯ ಯ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಚನ್ನಪಟ್ಟಣ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಬಳಿ ಮೋದಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಏಪ್ರಿಲ್ 30ರ ಬೆಳಗ್ಗೆ 11ರಿಂದ ಸಂಜೆ 4 ಗಂಟೆವರೆಗೆ ಮಾರ್ಗ ಬದಲಾವಣೆ ಮಾಡಿ ರಾಮನಗರ ಹಾಗೂ ಮಂಡ್ಯ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಅಂದು ರಾಮನಗರದ ಬಿಡದಿಯಿಂದ ಮದ್ದೂರಿನವರೆಗೂ ದಶಪಥ ಹೆದ್ದಾರಿಯ (Bengaluru-Mysuru Expressway) ಸಂಚಾರಕ್ಕೆ ನಿರ್ಬಂಧವಿರಲಿದೆ. ಎಕ್ಸ್ಪ್ರೆಸ್ ಹೈವೇ ಹಾಗೂ ಸರ್ವೀಸ್ ರಸ್ತೆಗಳಲ್ಲಿ ವಾಹನಗಳ ಓಡಾಟಕ್ಕೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆ ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ವಾಹನ ಸವಾರರಿಗೆ ಪರ್ಯಾಯ ಮಾರ್ಗಸೂಚಿ ನೀಡಲಾಗಿದೆ.
ಯಾವ ಮಾರ್ಗದಲ್ಲಿ ಸಂಚರಿಸಬಹುದು?
ಬೆಂಗಳೂರಿನಿಂದ ಮೈಸೂರಿಗೆ ಹೊರಡುವ ವಾಹನಗಳು ಬಿಡದಿ- ಹಾರೋಹಳ್ಳಿ- ಕನಕಪುರ-ಮಳವಳ್ಳಿ ಮಾರ್ಗವಾಗಿ ಮೈಸೂರಿಗೆ ಹೋಗಬಹುದು.
ಮೈಸೂರಿನಿಂದ ಬೆಂಗಳೂರಿಗೆ ಹೋಗುವ ವಾಹನಗಳು ಮದ್ದೂರು- ಕುಣಿಗಲ್- ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ತಲುಪಬಹುದು.
ಮೈಸೂರಿನಿಂದ ಬೆಂಗಳೂರಿಗೆ ಮತ್ತೊಂದು ಮಾರ್ಗವಿದ್ದು, ಮಳವಳ್ಳಿ, ಕನಕಪುರ, ಹಾರೋಹಳ್ಳಿ ಮಾರ್ಗವಾಗಿಯೂ ತೆರಳಬಹುದು.