ಬೆಂಗಳೂರು: ರಸ್ತೆ ಗುಂಡಿ ವಿಚಾರವಾಗಿ ಪ್ರತ್ಯೇಕ ಯೋಜನೆ ರೂಪಿಸುತ್ತೇವೆ. ತ್ಯಾಜ್ಯ ವಿಲೇವಾರಿ ಕುರಿತು ಅಧಿಕಾರಿಗಳ ಸಭೆ ಮಾಡಿದ್ದೇನೆ. ಈ ಬಗ್ಗೆ ಉತ್ತಮ ನಿರ್ವಹಣೆ ಮಾಡುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಲು ತೀರ್ಮಾನಿಸಿದ್ದೇವೆ. ಚೆನ್ನೈ, ಇಂದೋರ್ ಸೇರಿದಂತೆ ಅನೇಕ ಕಡೆಗಳಲ್ಲಿ ಉತ್ತಮ ತ್ಯಾಜ್ಯ ನಿರ್ವಹಣೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾವು ಈ ವಿಚಾರದಲ್ಲಿ ದೀರ್ಘಾವಧಿಯ ಯೋಜನೆ ರೂಪಿಸಿಕೊಳ್ಳಬೇಕು. ಕಾನೂನು ಮಿತಿ, ಭೂಪ್ರದೇಶದ ಮಿತಿಯಲ್ಲಿ ನಾವು ಯೋಜನೆ ರೂಪಿಸಬೇಕು.
ಕೇವಲ ಕಸ ತೆಗೆದುಕೊಂಡು ಹೋಗಿ ಸುರಿದರೆ ಆಗುವುದಿಲ್ಲ. ತ್ಯಾಜ್ಯದ ಬೆಟ್ಟ ನಿರ್ಮಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ.ಇದು ಒಂದು ದಿನ ಅಥವಾ ವರ್ಷದಲ್ಲಿ ಬದಲಾವಣೆ ತರಲು ಆಗುವುದಿಲ್ಲ. ಆದರೂ ಕಾಲಮಿತಿ ನಿಗದಿ ಮಾಡಿಕೊಂಡು ಕೆಲಸ ಮಾಡಬೇಕಿದೆ.
ಬೆಂಗಳೂರಿನ ಜನಸಂಖ್ಯೆ 1.30 ಕೋಟಿ ಇದೆ. 50 ಲಕ್ಷದಷ್ಟು ಮಂದಿ ಬೆಂಗಳೂರಿಗೆ ಬಂದು ಹೋಗುತ್ತಿದ್ದಾರೆ.ರಾಜ್ಯ ಹಾಗೂ ದೇಶಕ್ಕೆ ಬೆಂಗಳೂರಿನಿಂದ ಹೆಚ್ಚಿನ ಪ್ರಮಾಣದ ಹಣ ತೆರಿಗೆ ರೂಪದಲ್ಲಿ ಹೋಗುತ್ತಿದೆ. ಬೆಂಗಳೂರಿಗೆ ಉದ್ಯೋಗ, ಶಿಕ್ಷಣಕ್ಕಾಗಿ ಬಂದವರು ಮತ್ತೆ ತಮ್ಮ ಊರಿಗೆ ಹೋಗುತ್ತಿಲ್ಲ. ಇಲ್ಲೇ ನೆಲೆಸುತ್ತಿದ್ದಾರೆ.
ಹೀಗಾಗಿ ನಮ್ಮ ಪ್ರಣಾಳಿಕೆಯಲ್ಲಿ ಬೆಂಗಳೂರಿನ ಹೊರೆ ತಪ್ಪಿಸಲು 2-3ನೇ ದರ್ಜೆ ನಗರಗಳ ಅಭಿವೃದ್ಧಿ, ಎಲ್ಲಾ ಪಂಚಾಯ್ತಿ ಮಟ್ಟದಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ನೀಡುವ ಬಗ್ಗೆ ಕಾರ್ಯಕ್ರಮ ರೂಪಿಸಿದ್ದೇವೆ.
ಕಳೆದ ಬಾರಿಯ ಬಜೆಟ್ ಅನ್ನು ಹೆಚ್ಚಿನ ಬದಲಾವಣೆ ಮಾಡಲು ಆಗುವುದಿಲ್ಲ. ಹೀಗಾಗಿ ಇದಕ್ಕೆ ಹೊಸ ರೂಪ ನೀಡಲು ಮುಖ್ಯಮಂತ್ರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಪಾಲಿಕೆ ಮಟ್ಟದಲ್ಲಿ ಸಂಪನ್ಮೂಲ ಕ್ರೂಢೀಕರಣದ ಬಗ್ಗೆ ಪ್ರಶ್ನಿಸಿದಾಗ, ‘ನಾನು ಈ ವಿಚಾರವಾಗಿ ಚರ್ಚೆ ಮಾಡಿದ್ದೇನೆ. ಕೆಲವರು ತೆರಿಗೆ ವಂಚನೆ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಏನು ಮಾಡಬಹುದು ಎಂದು ಚರ್ಚೆ ಮಾಡುತ್ತಿದ್ದೇನೆ’ ಎಂದು ತಿಳಿಸಿದರು