ಕಾಸಾಬ್ಲಾಂಕಾ: ಶುಕ್ರವಾರ ತಡರಾತ್ರಿ ಮಧ್ಯ ಮೊರಾಕ್ಕೋದಲ್ಲಿ (Morocco Earthquake) ಸಂಭವಿಸಿದ 6.8 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ ಮೃತಪಟ್ಟವರ ಸಂಖ್ಯೆ 820 ಕ್ಕೆ ಏರಿಕೆಯಾಗಿದೆ. ಅಪಾರ ಸಂಖ್ಯೆಯಲ್ಲಿ ಜನ ಗಾಯಗೊಂಡಿದ್ದಾರೆ.
ಮೊರಾಕ್ಕೋದ ಆಂತರಿಕ ಸಚಿವಾಲಯ ಶನಿವಾರ ಮುಂಜಾನೆ ಹೇಳಿದ್ದು, ಭೂಕಂಪವಾದ ಪ್ರದೇಶಕ್ಕೆ ಸಮೀಪವಿರುವ ಪ್ರಾಂತ್ಯಗಳಲ್ಲಿ ಕನಿಷ್ಠ 820 ಜನರು ಸಾವನ್ನಪ್ಪಿದ್ದಾರೆ. ಗಾಯಗೊಂಡ 300 ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ನಗರಗಳು ಮತ್ತು ಪಟ್ಟಣಗಳ ಹೊರಗೆ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಸಚಿವಾಲಯ ತಿಳಿಸಿದೆ.
ಭೂಕಂಪದಿಂದ ಮೃತಪಟ್ಟವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಅವರು, “ಮೊರಾಕ್ಕೋದಲ್ಲಿ ಭೂಕಂಪದಿಂದ ಆಗಿರುವ ಜೀವಹಾನಿಯಿಂದ ತೀವ್ರ ನೋವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಈ ಕಷ್ಟದ ಸಮಯದಲ್ಲಿ ಮೊರಾಕ್ಕೋಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಾಗಿದೆ” ಎಂದು ತಿಳಿಸಿದ್ದಾರೆ