ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆತಿಥೇಯರ ಎದುರು ಬರೋಬ್ಬರಿ 5 ಪಂದ್ಯಗಳ ಸರಣಿಯಲ್ಲಿ ಕಾದಾಟ ನಡೆಸಲಿದೆ. ಭಾರತ ತಂಡ ಇದೇ ವರ್ಷ ಫೆಬ್ರವರಿ 1ರಂದು ತನ್ನ ಕಟ್ಟ ಕಡೆಯ ಟಿ20-ಐ ಪಂದ್ಯವನ್ನು ಆಡಿದ್ದು, ಇದೀಗ ಕೆರಿಬಿಯನ್ನರ ಎದುರು ಪೈಪೋಟಿ ನಡೆಸಲು ಸಜ್ಜಾಗಿದೆ. ಟೀಮ್ ಇಂಡಿಯಾ ಸದ್ಯ ವಿಶ್ರಾಂತಿಯಲ್ಲಿದ್ದು, ಜುಲೈನಲ್ಲಿ ಕೆರಿಬಿಯನ್ನರ ನಾಡಿಗೆ ಪ್ರಯಾಣ ಬಳೆಸಲಿದೆ.
ಮೊದಲಿಗೆ 2 ಪಂದ್ಯಗಳ ಟೆಸ್ಟ್ ಸರಣಿ ಮತ್ತು 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಗಳು ನಡೆಯಲಿವೆ. ಈ ಎರಡೂ ಸರಣಿಗಳಿಗೆ ಅನುಭವಿ ಓಪನರ್ ರೋಹಿತ್ ಶರ್ಮಾ ನಾಯಕನಾಗಿ ಮುಂದುವರಿಯುವ ಸಾಧ್ಯತೆ ಹೆಚ್ಚಿದ್ದು, ಬಳಿಕ ನಡೆಯಲಿರುವ 5 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಾರಥ್ಯ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಟಿ20 ಸರಣಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಅನುಭವಿಗಳನ್ನು ಹೊರಗಿಟ್ಟು ಯುವ ಆಟಗಾರರ ತಂಡವನ್ನು ಬಿಸಿಸಿಐ ಪ್ರಕಟ ಮಾಡಲಿದೆ ಎಂದು ಹೇಳಿವೆ.
ಕ್ರಿಕ್ ಬಝ್ ಮಾಡಿರುವ ವರದಿ ಪ್ರಕಾರ ಭಾರತದ ಟಿ20 ತಂಡದಲ್ಲಿ ಇನ್ನು ಮುಂದೆ ಹಿರಿಯ ಆಟಗಾರರಿಗೆ ಸ್ಥಾನವಿಲ್ಲ. ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಯೋಜನೆ ರೂಪಿಸಿರುವ ಬಿಸಿಸಿಐ, ಯುವ ಆಟಗಾರರ ಸತ್ವ ಪರೀಕ್ಷೆ ನಡೆಸಿ ಬಲಿಷ್ಠ ತಂಡ ರಚನೆ ಮಾಡುವ ಲೆಕ್ಕಾಚಾರದಲ್ಲಿದೆ. ಹೀಗಾಗಿ ವಿಂಡೀಸ್ ವಿರುದ್ಧದ ಮುಂಬರುವ ಟಿ20 ಸರಣಿಯಲ್ಲಿ ಯುವ ಆಟಗಾರ ಸಾಮರ್ಥ್ಯ ಅಳೆಯಲಾಗುತ್ತದೆ ಎಂದೇ ನಿರೀಕ್ಷಿಸಲಾಗಿದೆ.
ವೆಸ್ಟ್ ಇಂಡೀಸ್ ಪ್ರವಾಸದ ವೇಳಾಪಟ್ಟಿ
ಪ್ರಥಮ ಟೆಸ್ಟ್: ಜುಲೈ 12-16, ಡೊಮಿನಿಕ, ದ್ವಿತೀಯ ಟೆಸ್ಟ್: ಜುಲೈ 20-24, ಟ್ರಿನಿಡಾಡ್ (ಟೆಸ್ಟ್ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ಶುರುವಾಗಲಿವೆ).