ಬೆಂಗಳೂರು ;– ಪವಿತ್ರ ಅಮರನಾಥ ಯಾತ್ರೆಗೆ ತೆರಳಿದ್ದ ಯಾತ್ರಿಕರು ಭಾರೀ ಮಳೆಯ ಕಾರಣ ಸಿಲುಕಿಕೊಂಡಿದ್ದಾರೆ. ಇವರಲ್ಲಿ 20ಕ್ಕೂ ಹೆಚ್ಚು ಕನ್ನಡಿಗರು ಸೇರಿದ್ದಾರೆ.
ಸರ್ಕಾರ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಐಎಎಸ್ ಅಧಿಕಾರಿಯೊಬ್ಬರನ್ನು ನೇಮಕ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಈ ಕುರಿತು ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿಗಳು ಟ್ವೀಟ್ನಲ್ಲಿ, “ಪವಿತ್ರ ಅಮರನಾಥ ಯಾತ್ರೆಗೆ ತೆರಳಿ ಹವಾಮಾನ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ಸರ್ಕಾರ ಬದ್ಧವಾಗಿದೆ” ಎಂದು ಹೇಳಿದ್ದಾರೆ.
ಗದಗದಿಂದ ತೆರಳಿರುವ 23 ಮಂದಿ ಸೇರಿ ಒಟ್ಟು 80 ಮಂದಿ ಕನ್ನಡಿಗರು ಅಮರನಾಥ ಮಂದಿರದಿಂದ 6 ಕಿ. ಮೀ. ದೂರದಲ್ಲಿರುವ ಪಂಚತಾರ್ನಿ ಟೆಂಟ್ನಲ್ಲಿ ಸಿಲುಕಿದ್ದಾರೆ ಎನ್ನುವ ಮಾಹಿತಿ ಲಭ್ಯವಿದ್ದು, ಈ ಹಿನ್ನೆಲೆಯಲ್ಲಿ ಕೂಡಲೇ ರಕ್ಷಣಾ ಕಾರ್ಯ ಕೈಗೊಂಡು, ಎಲ್ಲರನ್ನೂ ಸುರಕ್ಷಿತವಾಗಿ ವಾಪಸು ಕರೆತರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.