ಬೆಂಗಳೂರು ;– ನಾಯಕರ ವರ್ತನೆಗಳೇ ಪಕ್ಷದ ಸೋಲಿಗೆ ಕಾರಣ ಎಂದು ಬಿಜೆಪಿ ಮುಖಂಡ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷದ ನಾಯಕರ ವರ್ತನೆಗಳೇ ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಕಾರಣ. ಪಕ್ಷ ಮತ್ತು ನಾಯಕರು ಸೂಜಿ ದಾರದಂತೆ ಕೆಲಸ ಮಾಡಬೇಕು. ಅದಕ್ಕಾಗಿಯೇ ಪಕ್ಷದ ಕಚೇರಿ ಕಟ್ಟಲಾಗಿದೆ. ಆದರೆ, ಬಿಜೆಪಿ ಕಚೇರಿಯಲ್ಲಿ ಕೆಲವರಿಗೆ ಬರೀ ಕತ್ತರಿ ಹಾಕೋದೇ ಕೆಲಸವಾಗಿದೆ. ಯಾರು ಮಾತನಾಡುತ್ತಾರೋ ಅವರನ್ನು ಮುಗಿಸೋದು ಅವರ ಕೆಲಸವಾಗಿದೆ.
ನಾನು ಸೋತಮೇಲೆ ಯಡಿಯೂರಪ್ಪ, ವಿಜಯೇಂದ್ರ ನನ್ನನ್ನು ಕರೆದು ಮಾತನಾಡಿದರು. ಆದರೆ ರಾಜ್ಯಾಧ್ಯಕ್ಷರಾದವರು ಒಂದು ಬಾರಿ ಆದರೂ ಮಾತಾಡಿದ್ರಾ..? ಪಾರ್ಟಿ ಆಫೀಸ್ನ್ನು ಕೆಲವರು ಕಾರ್ಪೊರೇಟ್ ಕಚೇರಿಯಾಗಿ ಮಾಡಿಕೊಂಡಿದ್ದರು ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಸೋಲಿನ ಬಳಿಕ ನಳೀನ್ ಕುಮಾರ್ ಕಟೀಲ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು..? ಮೊನ್ನೆ ರಾಜೀನಾಮೆ ಅಂದರು, ಆಮೇಲೆ ಇಲ್ಲ ಅಂದರು ಏನು ನಿಮ್ಮ ಉದ್ದೇಶ..? ನೀವು ನಾಲ್ಕೈದು ಬಾರಿ ರಾಜ್ಯ ಪ್ರವಾಸ ಮಾಡಿದ್ರಲ್ಲ ಏನು ಪ್ರಯೋಜನವಾಗಿದೆ..? ಅದು ಏನು ಮತಗಳಾಗಿ ಪರಿವರ್ತನೆ ಆಯ್ತಾ..? ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.
ನಾನು ಯಾವತ್ತಿಗೂ ಬಿಜೆಪಿ ವಿರುದ್ಧ ಮಾತನಾಡಿಲ್ಲ. ಬಿಜೆಪಿ ನನಗೆ ತಾಯಿಯ ಸಮಾನ, ಆದರೆ ಕೆಲವು ದೌರ್ಭಾಗ್ಯಗಳನ್ನು ಅನಿವಾರ್ಯವಾಗಿ ಮಾತಾಡಬೇಕಾಗುತ್ತದೆ. ಯಾರಿಗೋ ಅವಮಾನ ಮಾಡುವ ಅವಶ್ಯಕತೆ ನನಗಿಲ್ಲ. ನನಗೆ ಯಾವುದೇ ಭಯ ಇಲ್ಲ, ನಾನು ನಿರ್ಭಯವಾಗಿ ಮಾತನಾಡುತ್ತೇನೆ, ಚುನಾವಣೆಗೆ ಎರಡು ದಿನ ಇದ್ದ ವೇಳೆ ಆನ್ಲೈನ್ನಲ್ಲಿ ಸಭೆ ಮಾಡಿದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲು ಆಗದವರು ನಮಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ಬಿ.ಎಲ್ ಸಂತೋಷ್ ಹೆಸರೇಳದೆ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು, ಆ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಅವರ ಹೆಸರು ಈಗ ನಾನು ಹೇಳಲ್ಲ ಸಮಯ ಬಂದಾಗ ಅವರ ಹೆಸರು ಹೇಳುತ್ತೇನೆ ಎಂದರು.