ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರ ರಾಜ್ಯದ ಜನರಿಗೆ ಉಚಿತ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದು, ಇದೀಗ ಆಹಾರ ಮತ್ತು ನಾಗರಿಕ ಸಚಿವ ಕೆಹೆಚ್ ಮುನಿಯಪ್ಪ (KH.Muniyappa) ಅನ್ನಭಾಗ್ಯದ (Annabhagya) ಅಕ್ಕಿಯನ್ನು ಜನರಿಗೆ ಕೊಡಲು ದಾರಿ ತೋರಿಸುವಂತೆ ದೇವರ ಮೇಲೆ ಭಾರ ಹಾಕಿದ್ದಾರೆ. ರಾಜ್ಯದ ಜನತೆಗೆ ಅನ್ನಭಾಗ್ಯ ಒದಗಿಸುವ ಸಲುವಾಗಿ ಹೆಚ್ಚುವರಿ ಅಕ್ಕಿಗೆ ಮನವಿ ಸಲ್ಲಿಸಲು ಮುನಿಯಪ್ಪ ಅವರು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ (Piyush Goyal) ಅವರನ್ನು ಭೇಟಿ ಮಾಡಲು ದೆಹಲಿಗೆ (Delhi) ತೆರಳಿದ್ದರು.
ಆದರೆ ಕೇಂದ್ರ ಸಚಿವರು ಅನ್ಯರಾಜ್ಯದಲ್ಲಿ ಪ್ರವಾಸದಲ್ಲಿರುವ ಹಿನ್ನೆಲೆ ಅವರನ್ನು ಭೇಟಿ ಮಾಡದೇ ಮುನಿಯಪ್ಪ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರಿಗೆ 10 ಕೆಜಿ ಆದಷ್ಟು ಬೇಗ ಕೊಡುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಅದರ ಕೆಲಸಗಳು ಸುಗಮವಾಗಿ ಸಾಗುತ್ತಿದೆ. ಆಗಸ್ಟ್ 1ರ ಒಳಗಾಗಿ ಅಕ್ಕಿಯನ್ನು ಕೊಡುತ್ತೇವೆ. ಕೇಂದ್ರ ಸರ್ಕಾರದವರು ಅಕ್ಕಿ ಕೊಡುತ್ತೇವೆ ಎಂದು ಹೇಳಿ ಕೊಡಲಿಲ್ಲ. ಬುಧವಾರ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಲು ತೆರಳಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ ಎಂದರು.