ಬೆಂಗಳೂರು ;- ನಾಗವಾರ ಭೂ ಸ್ವಾದೀನ ಅಕ್ರಮ ಪ್ರಕರಣದ ತನಿಖೆ ನಡೆಸುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಬೆಂಗಳೂರು ಉತ್ತರ ತಾಲೂಕು ಕಸಬಾ ಹೋಬಳಿ ನಾಗವಾರ ಗ್ರಾಮದ ಸರ್ವೇ ನಂಬರ್ 135/1 ರಲ್ಲಿ ಬಿಡಿಎ ವಶಪಡಿಸಿಕೊಂಡಿರುವ 20 ಗುಂಟೆ ಜಾಗದಲ್ಲಿ ಮೆಟ್ರೋ ಮಾರ್ಗ ಹಾದು ಹೋಗುತ್ತಿದೆ.
ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಆ ಜಾಗವನ್ನು ಬಿಎಂಆರ್ಸಿಎಲ್ ಸ್ವಾಧೀನಪಡಿಸಿಕೊಂಡಿದೆ. ಬಿಡಿಎಗೆ ಬಂದ ನಂತರ ಅದು ಸರ್ಕಾರದ ಜಾಗ ಆ ಸರ್ಕಾರಿ ಜಾಗಕ್ಕೆ ಪರಿಹಾರವಾಗಿ ಖಾಸಗಿ ವ್ಯಕ್ತಿಗೆ 24 ಕೋಟಿ ಹಣ ಪಾವತಿ ಮಾಡಿದ್ದಾರೆ ಎನ್ನುವ ಆರೋಪ ಮಾಡಲಾಗಿದೆ. ಈ ಬಗ್ಗೆ ತನಿಖೆ ಮಾಡಿಸಲಾಗುತ್ತದೆ. ಸರ್ಕಾರದ ಒಂದು ರೂಪಾಯಿಯನ್ನೂ ಬಿಡಲ್ಲ ಎಂದರು.
ಬೊಮ್ಮನಹಳ್ಳಿಯಲ್ಲಿ ಸಾವಿರ ಕೋಟಿ ಆಸ್ತಿ ಕಬಳಿಕೆ ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಸದಸ್ಯರು ಮಾಡಿದ್ದಾರೆ. ಭೂ ಪರಿವರ್ತನೆಯಾಗಿ ನಿವೇಶನಗಳಾಗಿ ಹಂಚಿಕೆಯಾಗಿ 40 ವರ್ಷವಾದರೂ, ಮಾಲೀಕರ ಸ್ವಾಧೀನಕ್ಕೆ ಬಿಡುತ್ತಿಲ್ಲ. ಖಾಸಗಿಯವರು ರೌಡಿಗಳನ್ನಿಟ್ಟುಕೊಂಡು ಬೇಲಿ ಹಾಕಿ ಕಬಳಿಸಿದ್ದಾರೆ ಎಂದಿದ್ದಾರೆ.