ನವದೆಹಲಿ: ದೇಶವು ಬದಲಾವಣೆ ಕಾಣುತ್ತಿದ್ದು, ಕ್ರೀಡಾಪಟುಗಳ ಪರವಾಗಿರುವ ನಮ್ಮ ಸರ್ಕಾರ ಅವರ ಸಾಧನೆಯ ಹಾದಿಯಲ್ಲಿರುವ ಎಲ್ಲಾ ಅಡೆ ತಡೆಗಳನ್ನು ದೂರವಾಗಿಸುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಚೀನಾದ ಹಾಂಗ್ಝೋನಲ್ಲಿ ಕಳೆದ ವಾರ ಮುಕ್ತಾಯಗೊಂಡ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಂಡಿದ್ದ ಭಾರತೀಯ ಕ್ರೀಡಾಪಟುಗಳ ಜೊತೆ ಸಂವಾದ ನಡೆಸಿದ ಮೋದಿ, ಸರ್ಕಾರವು ಕ್ರೀಡಾಪಟುಗಳಿಗೆ ಉತ್ಕೃಷ್ಟ ಗುಣಮಟ್ಟದ ಸೌಕರ್ಯಗಳನ್ನು ಒದಗಿಸಲು ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.
‘ಈ ಹಿಂದೆ ಕ್ರೀಡಾಪಟುಗಳನ್ನು ಕಡೆಗಣಿಸಲಾಗುತ್ತಿತ್ತು. ಆದರೀಗ ನಾವು ಪ್ರತಿಯೊಬ್ಬ ಕ್ರೀಡಾಪಟುವಿನ ಮೇಲೆ 4-5 ಕೋಟಿ ರು. ಖರ್ಚು ಮಾಡುತ್ತಿದ್ದೇವೆ. ಕ್ರೀಡಾಪಟುಗಳ ಸಾಧನೆಯ ಹಾದಿಯಲ್ಲಿರುವ ಅಡೆ ತಡೆಗಳನ್ನು ದೂರವಾಗಿಸುತ್ತಿದ್ದೇವೆ’ ಎಂದರು. ಈ ಕಾರ್ಯಕ್ರಮದಲ್ಲಿ ಪದಕ ವಿಜೇತ ಕ್ರೀಡಾಪಟುಗಳನ್ನು ಅಭಿನಂದಿಸಿದ ಮೋದಿ, 2024ರ ಪ್ಯಾರಾಲಿಂಪಿಕ್ಸ್ನಲ್ಲೂ ಯಶಸ್ಸು ಸಾಧಿಸುವಂತೆ ಹಾರೈಸಿದರು.