ಮೈಸೂರು: ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಮಹಾಯುದ್ಧಕ್ಕೆ ಸಾಕ್ಷಿಯಾಗುವಂತಿದೆ. ಸದ್ಯ ಕೇಸ್ ಹೈಕೋರ್ಟ್ನಲ್ಲಿದ್ದು, ಗುರುವಾರ ಮತ್ತೆ ವಿಚಾರಣೆಗೆ ಬರಲಿದೆ. ಏನಾಗಲಿದೆ ಎಂಬ ಕುತೂಹಲ ಮೂಡಿದೆ. ಈ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ ಆಗಸ್ಟ್ 31ಕ್ಕೆ ರಾಜ್ಯಪಾಲರ ನಡೆ ಖಂಡಿಸಿ, ರಾಜಭವನ ಚಲೋ ರ್ಯಾಲಿಗೆ ಕರೆ ನೀಡಿದ್ದಾರೆ. ಅತ್ತ ಸಿಎಂ ಸಿದ್ದರಾಮಯ್ಯ ಪರ ಶೋಷಿತ ಸಮುದಾಯಗಳು ಪ್ರತಿಭಟನೆ ನಡೆಸಿವೆ.
ಇದರ ನಡುವೆ ಮೈಸೂರಿನಲ್ಲಿ ಅವರ ಪತ್ನಿ ಪಾರ್ವತಿ ವಿರುದ್ಧ ದೂರು ದಾಖಲಾಗಿದೆ. ನಕಲಿ ಸಹಿ ವಿಚಾರವಾಗಿ ಪಾರ್ವತಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.
ನಕಲಿ ದಾಖಲೆ ಸೃಷ್ಟಿ ಹಾಗೂ ಕಡತ ನಾಶದ ಬಗ್ಗೆ ಸ್ನೇಹಮಯಿ ಕೃಷ್ಣ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪಾರ್ವತಿ ಬರೆದಿದ್ದ ಮೂಲ ಪತ್ರ ನಾಶ ಮಾಡಿ, ಇತ್ತೀಚಿಗೆ ಸೃಷ್ಟಿಸಿರುವ ಪತ್ರವನ್ನು ಕಡತಕ್ಕೆ ಸೇರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹಾಗೂ ಸಹಚರರ ವಿರುದ್ಧವೂ ಕ್ರಮ ವಹಿಸುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.
ಸಿಎಂ ಬಿಡುಗಡೆ ಮಾಡಿದ್ದ ಪತ್ರದಲ್ಲಿ ವೈಟ್ನರ್ ಹಿಂದಿನ ಅಕ್ಷರ ತೋರಿಸಲಾಗಿತ್ತು. ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಎಂಬ ಅಕ್ಷರಗಳ ಮೇಲೆ ವೈಟ್ನರ್ ಹಾಕಲಾಗಿತ್ತು. ಈಗ ಆ ಮೂಲ ಪತ್ರ ತೋರಿಸಿರುವ ಬಗ್ಗೆಯೇ ದೂರು ದಾಖಲಾಗಿದೆ. ಪತ್ರದಲ್ಲಿರುವ ಪಾರ್ವತಿ ಅವರ ಸಹಿ ಹಾಗೂ ಮಾಹಿತಿ ಹಕ್ಕಿನಲ್ಲಿ ಪಡೆದ ಪತ್ರದಲ್ಲಿ ಇರುವ ಸಹಿ ಬದಲಾವಣೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.